ಜಿಲ್ಲೆ

ಮೂನ್ನೂರು ಎಕರೆಯಲ್ಲಿ ಪೆಂಡಾಲ್ ನಿರ್ಮಾಣ

ದಾವಣಗೆರೆ: ಕೇಂದ್ರ ಸಚಿವ ಅಮಿತ್ ಷಾ ಅವರು ಮಾ. 12ರಂದು ಹೊನ್ನಾಳಿಗೆ ಭೇಟಿ ನೀಡಲಿದ್ದು, ಅದಕ್ಕಾಗಿ ಅರಬಟ್ಟೆ ಸಮೀಪ 300 ಎಕರೆಯಲ್ಲಿ ಜರ್ಮನ್ ಮಾದರಿ ಪೆಂಡಾಲ್ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಕೇಂದ್ರ ಸಚಿವ ಅಮಿತ್ ಷಾ ಭೇಟಿ ಕಾರ್ಯಕ್ರಮಕ್ಕೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಸಮೀಪ ನಿರ್ಮಿಸುತ್ತಿರುವ ವೇದಿಕೆ ಸ್ಥಳವನ್ನು ಅಧಿಕಾರಿಗಳ ತಂಡದೊಂದಿಗೆ ಶುಕ್ರವಾರ ಪರಿಶೀಲನೆ ನಡೆಸಿ, ಮಾತನಾಡಿದರು.

ಮುಖಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತಿತರರು ಆಗಮಿಸಲಿದ್ದಾರೆ ಎಂದರು.

ತಾಂಡಾ, ಹಟ್ಟಿ, ಹೊಸಕ್ಯಾಂಪ್‌ನಂತಹ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಲಾಗಿದ್ದು, ಚಿತ್ರದುರ್ಗ, ಬಳ್ಳಾರಿ, ಗದಗ, ಧಾರವಾಡ, ಹಾವೇರಿ, ದಾವಣಗೆರೆ, ಶಿವಮೊಗ್ಗ ಮತ್ತಿತರ 12 ಜಿಲ್ಲೆಗಳ 53 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯ ಕಾರ್ಯಕ್ರಮದಲ್ಲಿ 50 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಿದರು. ಮೋದಿಯವರನ್ನು ಕರೆಸಿ ಹೊನ್ನಾಳಿಯಲ್ಲಿಯೇ ಆಯೋಜನೆ ಮಾಡಬೇಕೆಂಬ ನನ್ನ ಆಸೆ ಈಡೇರಲಿಲ್ಲ. ಹೊನ್ನಾಳಿಗೆ ಅಮಿತ್ ಷಾ ಅವರನ್ನು ಕರೆಸಲಾಗುತ್ತಿದ್ದು, ಇದು ಎರಡನೇ ಅತಿದೊಡ್ಡ ಕಾರ್ಯಕ್ರಮವಾಗಲಿದ್ದು, ಗಿನ್ನೀಸ್ ದಾಖಲೆಯಾಗಲಿದೆ ಎಂದರು.

ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1800 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು ನೆರವೇರಿಸಿಕೊಡಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಶಿವಾನಂದ್ ಕಾಪಶಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮೀತ್ ಷಾ ಹೊನ್ನಾಳಿ ಭೇಟಿ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. 12 ಜಿಲ್ಲೆಗಳಿಂದ ಬರುವ ಫಲಾನುಭವಿಗಳ ಮಾಹಿತಿ ಪಡೆಯಲು ಆಯಾ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುತ್ತಿದೆ ಎಂದರು.

ಎಸ್‌ಪಿ ಸಿ.ಬಿ. ರಿಷ್ಯಂತ್ ಮಾತನಾಡಿ, 12 ಜಿಲ್ಲೆಗಳಿಂದ ಬರುವ ಜನಸಂಖ್ಯೆಯನ್ನು ಆಧರಿಸಿ ಟ್ರಾಫಿಕ್, ಪಾರ್ಕಿಂಗ್ ವ್ಯವಸ್ಥೆ, ಮ್ಯಾಪಿಂಗ್ ಪ್ಲಾನ್ ತಯಾರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸಾರಿಗೆ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತು ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಲಾಗುವುದು ಎಂದರು.

ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಸೀಲ್ದಾರ್ ತಿರುಪತಿ ಪಾಟೀಲ್, ತಾಪಂ ಇಒ ರಾಮಭೋವಿ, ನ್ಯಾಮತಿ ತಹಸೀಲ್ದಾರ್ ಗಿರೀಶ್ ಬಾಬು, ಸಿಪಿಐ ಸಿದ್ದೇಗೌಡ, ಪಿಎಸ್‌ಐ ಶಿವಕುಮಾರ್, ನ್ಯಾಮತಿ ಪಿಎಸ್‌ಐ ರಾಘವೇಂದ್ರ ಕಾಂಡಕಿ, ಬಿಜೆಪಿ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಜೆ.ಕೆ. ಸುರೇಶ್, ಮುಖಂಡರಾದ ಎ.ಬಿ. ಹನುಮಂತಪ್ಪ, ನವೀನ್ ಇಂಚರ, ಮಂಜುನಾಥ್, ಅರಕೆರೆ ನಾಗರಾಜ್, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿನಾಯ್ಕ ಇತರರಿದ್ದರು.