ದಾವಣಗೆರೆ: ಭಾರತದಲ್ಲಿ ಒಬ್ಬರು ಎರಡು ಅವಧಿಗೆ ಶಾಸಕ ಅಥವಾ ಸಂಸದರಾಗಲು ಮಿತಿ ಹೇರಬೇಕು. ಹಾಗಾದಾಗ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.
ಇಲ್ಲಿನ ಎಸ್.ಎಸ್.ಬಡಾವಣೆಯಲ್ಲಿ ಭಾನುವಾರ ಸ್ವಾಭಿಮಾನಿ ಬಳಗ ಹಾಗೂ ಮಹರ್ಷಿ ವಾಲ್ಮೀಕಿ, ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಭಕ್ತ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಕುಟುಂಬ ರಾಜಕಾರಣ ಹೆಚ್ಚುತ್ತಿದೆ. ಬಡವರು, ಜನಸಾಮಾನ್ಯರಿಗೂ ರಾಜಕಾರಣಕ್ಕೆ ಬರುವ ಹಂಬಲವಿದ್ದರೂ ಇಂದಿನ ಚುನಾವಣೆ ಎದುರಿಸಲು ಕನಿಷ್ಠ 100 ಕೋಟಿ ರೂ. ಬೇಕಿದೆ. ಇದಕ್ಕೆ ಪೂರ್ಣವಿರಾಮ ಹಾಕಬೇಕಿದ್ದರೆ ಎರಡು ಅವಧಿಗೆ ಮೀರಿ ಯಾರೂ ಚುನಾವಣೆಗೆ ಸ್ಪರ್ಧಿಸದಂತಾಗಬೇಕು ಎಂದು ಆಶಿಸಿದರು.
ಅಮೆರಿಕದಲ್ಲಿ ಎರಡು ಅವಧಿಗೂ ಮೀರಿ ಅಧ್ಯಕ್ಷರಾಗಲು ಅವಕಾಶವಿಲ್ಲ. ಒಬ್ಬರೇ ಕಡೆಗಾಲದವರೆಗೂ ಜನಪ್ರತಿನಿಧಿಯಾದಲ್ಲಿ ಭ್ರಷ್ಟಾಚಾರದ ಪ್ರಮಾಣ ಕೂಡ ಹೆಚ್ಚುತ್ತ ಹೋಗಲಿದೆ. ಹೀಗಾಗಿ ಭಾರತದಲ್ಲಿ ಹೊಸತನ ಬರಬೇಕು. ವಿನಯಕುಮಾರ್ ಅಂಥವರು ಈ ಪ್ರಯತ್ನ ನಡೆಸಬೇಕು ಎಂದೂ ಹೇಳಿದರು.
ಬಸವಣ್ಣ ಸ್ಥಾಪಿಸಿದ ಕಲ್ಯಾಣ ರಾಜ್ಯ, ಅಂಬೇಡ್ಕರ್ ರಚಿಸಿದ ಸಂವಿಧಾನ ಎರಡೂ ಕೂಡ ಒಂದು ನಾಣ್ಯದ ಎರಡು ಮುಖ. ಇವರೆಡರ ಆಶಯ ತಿಳಿಸುವ ಜತೆಗೆ ಸ್ವಾಭಿಮಾನ ಬಡಿದೆಚ್ಚರಿಸಲು ಸ್ವಾಭಿಮಾನಿ ಬಳಗ ಸ್ಥಾಪನೆಯಾಗಿದೆ. ಹಣಕ್ಕಿಂತಲೂ ಸ್ವಾಭಿಮಾನ ದೊಡ್ಡದು. ಇದನ್ನು ಬೆಳೆಸಿಕೊಂಡವರಲ್ಲಿ ಹಣ ತಾನಾಗಿಯೇ ಹುಡುಕಿಕೊಂಡು ಬರಲಿದೆ ಎಂದರು.
ಡಾನ್‌ಬಾಸ್ಕೋ ಸಂಸ್ಥೆಯ ಮುಖ್ಯಸ್ಥ ರೆಜಿ ಜೇಕಬ್ ಮಾತನಾಡಿ ಎಲ್ಲರಲ್ಲೂ ಭಗವಂತನ ಶಕ್ತಿ ಇದೆ. ಮತ್ತೊಬ್ಬರಲ್ಲಿ ನಾವು ಪ್ರೀತಿ ಹಂಚದಿದ್ದರೆ ಜೀವನ ವ್ಯರ್ಥವಾಗಲಿದೆ. ಸ್ವಾಭಿಮಾನಿ ಬಳಗ ನೊಂದವರು, ಸಂಕಷ್ಟದಲ್ಲಿದ್ದವರಿಗೆ ನೆರಳು, ಧೈರ್ಯ ಹಾಗೂ ಹೊಸ ದಾರಿ ತೋರಿಸಲಿ ಎಂದು ಆಶಿಸಿದರು.
ಸ್ವಾಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಜಿ.ಬಿ. ವಿನಯಕುಮಾರ್ ಮಾತನಾಡಿ ಜನರಲ್ಲಿ ರಾಜಕೀಯ ಹಾಗೂ ಸಾಮಾಜಿಕ ಪ್ರಜ್ಞೆ ಬೆಳೆಸಲು ಹಾಗೂ ಮಕ್ಕಳ ಶಕ್ತಿ-ಪ್ರತಿಭೆಗೆ ತಕ್ಕ ಉತ್ತಮ ಜೀವನ ಕಲ್ಪಿಸುವ ದಿಸೆಯಲ್ಲಿ ಸ್ವಾಭಿಮಾನ ಬಳಗ ಕಟ್ಟಿದ್ದೇನೆ. ರಾಜ್ಯವ್ಯಾಪಿ ಪ್ರವಾಸ ಮಾಡಲಿದ್ದೇನೆ. ಸಂಘಟನೆ ಮುಂದಿನ ಮೂರು ವರ್ಷದಲ್ಲಿ ಕರ್ನಾಟಕದಲ್ಲಿ ಕ್ರಾಂತಿ ಮಾಡಲಿದೆ ಎಂದು ಹೇಳಿದರು.
ಹಣದ ಹೊಳೆ, ಅಪಪ್ರಚಾರದ ನಡುವೆಯೂ ಲೋಕಸಭೆ ಚುನಾವಣೆಯಲ್ಲಿ ಸೋಲುಂಡರೂ ದೃತಿಗೆಟ್ಟಿಲ್ಲ. ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಸ್ಥಾನಮಾನಕ್ಕೂ ಕೈ ಚಾಚಿಲ್ಲ. ಉತ್ತರದಾಯಿತ್ವದ ಭಾಗವಾಗಿ ಸ್ವಾಮೀಜಿಗಳು, ಮುಖಂಡರ ಸಮ್ಮುಖದಲ್ಲಿ ಸಂಘಟನೆಯನ್ನು ಸರಳವಾಗಿ ಆರಂಭಿಸಿದ್ದೇನೆ ಎಂದರು.
ಇನ್‌ಸೈಟ್ಸ್ ಸಂಸ್ಥೆ ಮೂಲಕ ಅನೇಕ ಅಧಿಕಾರಿಗಳನ್ನು ಸಮಾಜಕ್ಕೆ ನೀಡಿದ್ದೇನೆ. ಬಹುತೇಕ ಕಡೆ ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ. ಶೈಕ್ಷಣಿಕ ಅಸಮಾನತೆ ಇದೆ. ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕಲ್ಪಿಸದೆ ವೋಟ್‌ಬ್ಯಾಂಕ್‌ಗೆ ಸೀಮಿತ ಮಾಡುವಂಥ ಕ್ರೌರ್ಯ ಭಾರತದ ಎಲ್ಲ ಶಾಸಕ, ಸಂಸದರ ಕ್ಷೇತ್ರದಲ್ಲಿ ನಡೆಯುತ್ತಿದೆ. ಇದನ್ನು ಕೊನೆಗಾಣಿಸುವ ಉದ್ದೇಶ ನನ್ನದು ಎಂದರು.
ಪತ್ರಕರ್ತ ಬಸವರಾಜ ದೊಡ್ಮನಿ ಸ್ವಾಭಿಮಾನಿ ಬಳಗದ ವೆಬ್‌ಸೈಟ್ ಬಿಡುಗಡೆಗೊಳಿಸಿದರು. ಸಂಘಟನೆ ಮುಖಂಡ ರಾಜುಮೌರ್ಯ, ಮೌಲಾನಾ ಖಾಜಿ ಮಹಮ್ಮದ್ ಇಲಿಯಾಜ್ ಖಾದ್ರಿ ಇದ್ದರು. ಸಾಧಕರಾದ ಯುಗಧರ್ಮ ರಾಮಣ್ಣ, ಎಸ್. ಸ್ತುತಿ, ಗೂಳಪ್ಪ ನೀಲಪ್ಪ ಮುಗದೂ, ಕೆ.ಟಿ.ಚಂದ್ರಶೇಖರ್, ಕೆ.ವೈ. ಸೃಷ್ಟಿ, ಬಿ.ಎ. ನಿಧಿ ಬೇತೂರು, ವಿ. ಲಕ್ಷ್ಮಣ್, ಸಿ. ಹನುಮೇಶ್ ಅವರನ್ನು ಸನ್ಮಾನಿಸಲಾಯಿತು.
--