ಜಿಲ್ಲೆ

ಆಟಿಸಂ ಸಮಸ್ಯಾತ್ಮಕ ಮಕ್ಕಳಿಗಾಗಿ ದಾವಣಗೆರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ಘಟಕ

ಡಿ. ಎಂ. ಮಹೇಶ್

ದಾವಣಗೆರೆ: ಆಟಿಸಂ ಸಮಸ್ಯಾತ್ಮಕ ಮಕ್ಕಳಿಗಾಗಿ ದಾವಣಗೆರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ಘಟಕ ಆರಂಭಕ್ಕೆ ಕ್ರಮ ವಹಿಸಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಸೋಮವಾರ, ದಾವಣಗೆರೆ ಹೊರವಲಯದ ವಿಶೇಷ ದತ್ತು ಸಂಸ್ಥೆ ಅಮೂಲ್ಯ (ಜಿ) ಕೇಂದ್ರದ ಎರಡನೇ ಘಟಕ ಹಾಗೂ ಫೀಜಿಯೋಥೆರಪಿ ಕೇಂದ್ರ ಉದ್ಘಾಟಿಸಿ, ಜಿಲ್ಲಾಧಿಕಾರಿ ಜತೆ ಸಮಾಲೋಚನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಘಟಕ ಆರಂಭಕ್ಕೆ ದಾವಣಗೆರೆಯಲ್ಲಿ 2-3 ಕಡೆ ಅವಕಾಶ ಇದೆ. ಚರ್ಚಿಸಿ ಜಾಗ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರು ತಿಳಿಸಿದ್ದಾರೆ. ಮೈಸೂರು ಬಿಟ್ಟರೆ ಬೇರೆಲ್ಲೂ ಈ ಘಟಕ ಇಲ್ಲ. ಮಧ್ಯಕರ್ನಾಟಕದಲ್ಲಿ ಈ ಘಟಕ ಆರಂಭವಾದಲ್ಲಿ ಸುತ್ತಮುತ್ತಲ ಜಿಲ್ಲೆಯವರಿಗೆ ಅನುಕೂಲ ಆಗಲಿದೆ ಎಂದರು.

ಪ್ರತ್ಯೇಕ ಘಟಕ ನಿರ್ಮಾಣ ಸವಾಲಿನ ಕೆಲಸ. ದೊಡ್ಡ ಬಂಡವಾಳ ಹೂಡಿಕೆ ಆದ್ದರಿಂದ ದಾನಿಗಳು, ಎನ್‌ಜಿಒಗಳ ನೆರವು ಬೇಕು. ಜಾಗದ ಜತೆ ಉಪಕರಣಗಳು, ನುರಿತ ವೈದ್ಯರು, ಶುಶ್ರೂಷಕರ ಅಗತ್ಯವಿದೆ. ಹೀಗಾಗಿ ವ್ಯವಸ್ಥಿತವಾಗಿಯೇ ಇದನ್ನು ತೆರೆಯುವ ಇರಾದೆ ಇದೆ ಎಂದರು.

ದಾವಣಗೆರೆಯಲ್ಲಿ ಖಾಸಗಿಯವರು ನಡೆಸುತ್ತಿರುವ ಶಾಲೆಯಲ್ಲಿ ಸುಮಾರು 60 ಆಟಿಸಂ ನ್ಯೂನತೆಯ ಚಿಣ್ಣರಿರುವ ಮಾಹಿತಿ ಇದೆ. ಆ ಶಾಲೆಗೆ ಭೆಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.

ದಾವಣಗೆರೆಯ ವಿಶೇಷ ದತ್ತು ಕೇಂದ್ರದಲ್ಲಿ ನಿರ್ಗತಿಕ, ಅನಾಥರೂ ಸೇರಿ ಹಾಲಿ 27 ಚಿಣ್ಣರಿದ್ದಾರೆ. ಈಗ ಮತ್ತೊಂದು ಘಟಕವನ್ನು ಆರಂಭಿಸಲಾಗಿದೆ. ಸಮಸ್ಯಾತ್ಮಕ ಮಕ್ಕಳಿಗೆ ಫೀಜಿಯೋಥೆರಪಿ ಕೇಂದ್ರವನ್ನೂ ಆರಂಭಿಸಲಾಗಿದೆ ಎಂದ ಸಂಸದರು, ಸಾರ್ವಜನಿಕರು ಇಲ್ಲಿ ಜನ್ಮದಿನ ಆಚರಿಸಿಕೊಳ್ಳುವ ಮೂಲಕ ದತ್ತು ಕೇಂದ್ರ, ರಾಜ್ಯ ಮಹಿಳಾ ನಿಲಯದ ಅಗತ್ಯತೆಗಳಿಗೆ ಕೈ ಜೋಡಿಸಬೇಕು. ಸರ್ಕಾರ ಕೂಡ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದರು.

ರಾಜ್ಯ ಮಹಿಳಾ ನಿಲಯದಲ್ಲಿ ಮಾನಸಿಕ ಸಮಸ್ಯೆಯುಳ್ಳ ಹೆಣ್ಣುಮಕ್ಕಳು ಹೆಚ್ಚಿದ್ದು ಅವರನ್ನು ಪ್ರತ್ಯೇಕವಾಗಿ ಇರಿಸಲು ಸಂಸದರು ಸೂಚಿಸಿದ್ದಾರೆ. ವಾತ್ಸಲ್ಯ ಕೇಂದ್ರಕ್ಕೆ ಪ್ರತ್ಯೇಕ ಜಾಗ ನೀಡಬೇಕಿದ್ದು ಇದರ ತರುವಾಯ ಮಾನಸಿಕ ಸಮಸ್ಯಾತ್ಮಕ ಹೆಣ್ಣುಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆಯಾಗಲಿದೆ. ಅಗತ್ಯ ದುರಸ್ತಿ ಕಾರ್ಯಗಳನ್ನು ವಿವಿಧ ಇಲಾಖೆಗಳ ಅನುದಾನದಲ್ಲಿ ನಡೆಸಲಾಗುವುದು ಎಂದು ಡಿಸಿ ತಿಳಿಸಿದರು.

ಮಹಿಳಾ ನಿಲಯಾರ್ಥಿಗಳಿಗೆ ಟೈಲರಿಂಗ್ ಯಂತ್ರಗಳನ್ನು ಒದಗಿಸಿಕೊಡುವುದಾಗಿ ಹೇಳಿದ ಜಿಲ್ಲಾಧಿಕಾರಿ, ನಿಲಯದ ಬೇಡಿಕೆಗಳ ಪಟ್ಟಿ ನೀಡಿದಲ್ಲಿ ಗಮನ ಹರಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಸಂಸದರು ದತ್ತು ಕೇಂದ್ರದ ಕೆಲವು ಮಕ್ಕಳಿಗೆ ನಾಮಕರಣ ಮಾಡಿದರು. ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಡಿಎಚ್‌ಒ ಡಾ. ಷಣ್ಮುಖಪ್ಪ, ಚಿಗಟೇರಿ ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ನಾಗೇಂದ್ರಪ್ಪ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಟಿ.ಎಂ. ಕವಿತಾ, ಜಿಲ್ಲಾ ಕಾರ್ಯಕ್ರಮ ನಿರೂಪಣಾಧಿಕಾರಿ ಬಿ.ಇ. ಲತಾ, ಬಾಲಭವನ ಅಧಿಕಾರಿ ಗುರುಪ್ರಸಾದ್, ವಿಶೇಷ ವೈದ್ಯಾಧಿಕಾರಿ ಡಾ. ಚೈತಾಲಿ, ಮಹಿಳಾ ನಿಲಯದ ಅಧೀಕ್ಷಕಿ ಫಾತಿಮಾ. ಸರ್ಕಾರಿ ಬಾಲಮಂದಿರದ ಅಧೀಕ್ಷಕ ಶಿವಕುಮಾರ್, ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಇತರರಿದ್ದರು.