ರಮೇಶ ಜಹಗೀರದಾರ್ ದಾವಣಗೆರೆ
ವಾಹನ ಚಾಲಕರಿಗೆ ಚಾಲನಾ ಪರವಾನಗಿ ನೀಡಲು ಸೆನ್ಸರ್ ಆಧಾರಿತ ವ್ಯವಸ್ಥೆಯ ಮೂಲಕ ಪರೀಕ್ಷೆ ನಡೆಸುವ ತಂತ್ರಜ್ಞಾನ ಈಗ ದಾವಣಗೆರೆಗೆ ಕಾಲಿಟ್ಟಿದೆ. ಇದಕ್ಕಾಗಿ ತಾಲೂಕಿನ ಅಣಜಿ ಗ್ರಾಮದ ಬಳಿಯ ಗೊಲ್ಲರಹಳ್ಳಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ (ಡ್ರೈವಿಂಗ್ ಟ್ರಾೃಕ್) ಸಿದ್ಧವಾಗುತ್ತಿದೆ.
ಸಾರಿಗೆ ಇಲಾಖೆಯ ಅಧಿಕಾರಿಗಳೇ ಮುಂದೆ ನಿಂತು ಪರೀಕ್ಷಿಸುವ ಪದ್ಧತಿ ಇನ್ನು ಮುಂದೆ ಇರುವುದಿಲ್ಲ. ಎಲ್ಲವೂ ಸೆನ್ಸರ್ ತಂತ್ರಜ್ಞಾನದ ನೆರವಿನಿಂದ ಸ್ವಯಂ ಚಾಲಿತವಾಗಿ ನಡೆಯಲಿದೆ.
ಹೊಸ ಡ್ರೈವಿಂಗ್ ಟ್ರಾೃಕ್ ಜಗಳೂರಿಗೆ ತೆರಳುವ ಮಾರ್ಗದಲ್ಲಿ ದಾವಣಗೆರೆಯಿಂದ 18-20 ಕಿ.ಮೀ. ದೂರದಲ್ಲಿದೆ. ಅಲ್ಲಿ ಈಗಾಗಲೇ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ, ಕಚೇರಿ, ನಿಯಂತ್ರಣ ಕೊಠಡಿಗಳು ಮತ್ತು ಕಾಂಪೌಂಡ್ ನಿರ್ಮಿಸಲಾಗಿದೆ. ಪೀಠೋಪಕರಣ, ಕಂಪ್ಯೂಟರ್ ಹಾಗೂ ಸೆನ್ಸರ್‌ಗಳನ್ನು ಅಳವಡಿಸುವುದು ಮಾತ್ರ ಬಾಕಿ ಇದೆ. ಕೆಎಸ್‌ಆರ್‌ಟಿಸಿಯ ಸಿವಿಲ್ ವಿಭಾಗ ಈ ಕಾಮಗಾರಿಗಳನ್ನು ಮಾಡುತ್ತಿದೆ.
ರಾಜ್ಯ ಸರ್ಕಾರದ 2022-23ನೇ ಸಾಲಿನ ಬಜೆಟ್ ಭಾಷಣದಲ್ಲಿ ಡ್ರೈವಿಂಗ್ ಟ್ರಾೃಕ್ ನಿರ್ಮಾಣದ ವಿಷಯ ಪ್ರಸ್ತಾಪವಾಗಿತ್ತು. ರಾಜ್ಯದ ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್, ಯಾದಗಿರಿ ಮತ್ತು ದಾವಣಗೆರೆಯಲ್ಲಿ ಮಾಡಲು ನಿರ್ಧಾರವಾಗಿತ್ತು.
ಈ ಯೋಜನೆಗಾಗಿ ದಾವಣಗೆರೆ ಸುತ್ತಮುತ್ತ ಸರ್ಕಾರಿ ಜಮೀನು ಸಿಗದ ಕಾರಣ ಅಣಜಿ ಬಳಿಯ ಗೊಲ್ಲರಹಳ್ಳಿಯಲ್ಲಿ 7 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿತು.
...
(ಬಾಕ್ಸ್)
9 ಕೋಟಿ ರೂ. ಯೋಜನೆ
ಒಟ್ಟು 9 ಕೋಟಿ ರೂ.ಗಳ ಯೋಜನೆ ಇದಾಗಿದೆ. 4.5 ಎಕರೆಯಲ್ಲಿ ಡ್ರೈವಿಂಗ್ ಟ್ರಾೃಕ್ ನಿರ್ಮಾಣವಾಗಿದೆ. ಭಾರೀ ವಾಹನಗಳು, ಲಘು ಮೋಟಾರು ವಾಹನಗಳು ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಟ್ರಾೃಕ್‌ಗಳಿವೆ. 3 ಕಂಟ್ರೋಲ್ ರೂಮ್‌ಗಳನ್ನು ನಿರ್ಮಿಸಲಾಗಿದೆ. ಕಾಮಗಾರಿ ಅಂತಿಮ ಹಂತದಲ್ಲಿದ್ದು ಸದ್ಯದಲ್ಲೇ ಸಾರಿಗೆ ಇಲಾಖೆಗೆ ಹಸ್ತಾಂತರವಾಗಲಿದೆ.
ವಾಹನ ಚಾಲಕರು ಡಿಎಲ್‌ಗಾಗಿ ಅರ್ಜಿ ಸಲ್ಲಿಸಿದಾಗ ಇಲ್ಲಿನ ಆರ್‌ಟಿಒ ಕಚೇರಿ ಆವರಣದಲ್ಲಿರುವ ಸಣ್ಣ ಜಾಗದಲ್ಲೆ ಇದುವರೆಗೆ ಚಾಲನಾ ಪರೀಕ್ಷೆ ಮಾಡುವ ವ್ಯವಸ್ಥೆ ಇದೆ. ಚಾಲಕ ವಾಹನ ಚಾಲನೆ ಮಾಡುವುದನ್ನು ಇಲಾಖೆಯ ಅಧಿಕಾರಿಗಳು ಸ್ವತಃ ಗಮನಿಸಿ ನಂತರ ಪರವಾನಗಿ ನೀಡುವ ವ್ಯವಸ್ಥೆಯಿದೆ. ದಾವಣಗೆರೆಯಲ್ಲಿ ಪ್ರತಿ ದಿನ 120-130 ವಾಹನಗಳ ಚಾಲನಾ ಪರೀಕ್ಷೆಗೆ ಸ್ಲಾಟ್‌ಗಳನ್ನು ನೀಡಲಾಗುತ್ತದೆ.
...
* ಮುಂಬರುವ ದಿನಗಳಲ್ಲಿ ಚಾಲಕರು ಪರೀಕ್ಷೆ ನೀಡಲು ಅಣಜಿ ಬಳಿಯ ಹೊಸ ಡ್ರೈವಿಂಗ್ ಟ್ರಾೃಕ್‌ಗೆ ಬರಬೇಕಾಗುತ್ತದೆ.
* ಅಲ್ಲಿ ಅಳವಡಿಸಲಾಗುವ ಸೆನ್ಸರ್‌ಗಳು ಚಾಲಕರು ಮಾಡುವ ತಪ್ಪು, ಒಪ್ಪುಗಳನ್ನು ದಾಖಲಿಸುತ್ತವೆ.
* ಚಾಲನೆ ಸರಿಯಾಗಿ ಮಾಡಿದ್ದಾರೆಯೆ ಇಲ್ಲವೆ ಎಂಬುದನ್ನು ಹೊಸ ತಂತ್ರಜ್ಞಾನವೇ ತಿಳಿಸಿಬಿಡುತ್ತದೆ.
* ಎಲ್ಲವೂ ಸ್ವಯಂ ಚಾಲಿತವಾಗಿ ನಡೆಯುತ್ತದೆ.
* ಸಹಾಯಕ ಪ್ರಾದೇಶಿಕ ಅಧಿಕಾರಿ, ಮೋಟಾರು ವಾಹನ ನಿರೀಕ್ಷಕರು ಮತ್ತು ಸಿಬ್ಬಂದಿ ಅಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
* ವಾಹನ ಸುಸ್ಥಿತಿಯಲ್ಲಿದೆಯೆ ಎಂಬುದನ್ನು ಪರೀಕ್ಷಿಸಿ ಎಫ್‌ಸಿ ನೀಡಲು ಇನ್ಸ್‌ಪೆಕ್ಷನ್ ಆ್ಯಂಡ್ ಸರ್ಟಿಫಿಕೇಶನ್ ಮಾಡುವ ಯೋಜನೆಯ ಪ್ರಸ್ತಾವನೆಯನ್ನು ಇಲಾಖೆಗೆ ಕಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಅದನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ.
...
(ಕೋಟ್)
ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ವ್ಯವಸ್ಥೆಯಿಂದ ಗುಣಮಟ್ಟದ ಚಾಲನೆಯನ್ನು ಖಾತರಿಪಡಿಸಬಹುದು. ಚಾಲಕರು ತಪ್ಪು ಮಾಡಿದರೆ ಹೊಸ ತಂತ್ರಜ್ಞಾನ ಅದನ್ನು ಪತ್ತೆಹಚ್ಚುತ್ತದೆ. ಒಳ್ಳೆಯ, ಕುಶಲ ಚಾಲಕರನ್ನು ಗುರುತಿಸಲು ಸಾಧ್ಯವಾಗುತ್ತದೆ.
ಸಿ.ಎಸ್. ಪ್ರಮುತೇಶ್, ಆರ್‌ಟಿಒ, ದಾವಣಗೆರೆ