ಜಿಲ್ಲೆ

ಮಕ್ಕಳ ಶಿಕ್ಷಣ ಸರ್ಕಾರದ ಜವಾಬ್ಧಾರಿ     ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ

ಡಿ. ಎಂ. ಮಹೇಶ್

ದಾವಣಗೆರೆ: ಮಕ್ಕಳಿಗೆ ಶಿಕ್ಷಣ ನೀಡುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ಧಾರಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಡಾ. ಬಿ. ಎಂ.ತಿಪ್ಪೇಸ್ವಾಮಿ ಸ್ಮಾರಕ ಶಾಲಾವರಣದಲ್ಲಿ ಆದಿಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ರಗ್ಗು, ಹೊದಿಕೆ ಇತರೆ ಸಾಮಗ್ರಿ ವಿತರಿಸಿ ಮಾತನಾಡಿದರು.
ದೇಶದಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬುದು ಸಂವಿಧಾನದ ಆಶಯವಾಗಿದ್ದು, ಅದನ್ನು ಕಾರ್ಯ ರೂಪಕ್ಕೆ ತರುವುದು ಆಳುವವರ ಜವಾಬ್ಧಾರಿ ಎಂದು ಸ್ಪಷ್ಟವಾಗಿ ಉಲ್ಲೇಖವಿದೆ ಎಂದು  ತಿಳಿಸಿದರು.
ಶಿಕ್ಷಣದಿಂದ ದೇಶದಲ್ಲಿಂದು ಅಭೂತಪೂರ್ವ ಬದಲಾವಣೆಯಾಗಿದ್ದು, ಪರಿಶಿಷ್ಟರ ಮಕ್ಕಳೂ ಈಗ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡುತ್ತಿರುವುದು ಗಮನಾರ್ಹ. ಮಕ್ಕಳ ಭವಿಷ್ಯ, ಅವರವರ  ಕೈಯಲ್ಲೇ ಇದೆ. ಅರ್ಥ ಮಾಡಿಕೊಂಡು, ಉನ್ನತ ಸಾಧನೆ ಮಾಡಬೇಕು ಎಂದರು.
ಸಂಘದ ಕಾರ್ಯದರ್ಶಿ ಬಿ.ಎಚ್.ವೀರಭದ್ರಪ್ಪ ಮಾತನಾಡಿ, ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಡಾ.ಬಿ.ಎಂ. ತಿಪ್ಪೇಸ್ವಾಮಿ ಸಂಯುಕ್ತ ಪಿಯು ಕಾಲೇಜು ಸೇರಿ ಒಂದಿಷ್ಟು ಸಮಸ್ಯೆಗಳಿವೆ. ಸರ್ಕಾರದ ಮಟ್ಟದಲ್ಲೇ ಪರಿಹಾರ ಸಿಗಬೇಕಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆ, ಸಮಾಜದ ಮುಖಂಡರ ನಿಯೋಗವು ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಬರಲಿದ್ದೇವೆ. ಸಂಸ್ಥೆಗೆ ಕಾಲೇಜು ಮಂಜೂರು ಮಾಡಿಸಿಕೊಡಬೇಕು ಮನವಿ ಮಾಡಿದರು.
ಕೆಪಿಸಿಸಿ ಉಪಾಧ್ಯಕ್ಷ ಎಸ್.ವಿಜಯಕುಮಾರ, ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಉಪಾಧ್ಯಕ್ಷ ಬಿ.ಎಂ. ರಾಮಸ್ವಾಮಿ, ಜಂಟಿ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಕೆ. ಚಂದ್ರಣ್ಣ, ಸದಸ್ಯರಾದ ಗಂಗಾಧರಪ್ಪ, ಬಿ.ಎಂ. ಈಶ್ವರಪ್ಪ ಗಾಂಧಿ ನಗರ, ಎಲ್.ಎಂ.ಎಚ್. ಸಾಗರ್, ಹಿರಿಯ ವಕೀಲ ಮಂಜಪ್ಪ ಹಲಗೇರಿ, ನಾಗರಾಜಪ್ಪ ಆದಾಪುರ, ಜಿ.ಎನ್. ಸಂತೋಷ, ಯುವ ಮುಖಂಡ ರಾಕೇಶ ಇತರರಿದ್ದರು.
ಪತ್ರಕರ್ತ ನಾಗರಾಜ ಎಸ್. ಬಡದಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರನ್ನು ಸಂಸ್ಥೆ ಪರವಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಸನ್ಮಾನಿಸಿದರು. ಇದೇ ವೇಳೆ 85 ಮಕ್ಕಳಿಗೆ ಸಮವಸ್ತ್ರ, ಇನ್ನಿತರ ಪರಿಕರಗಳನ್ನು ವಿತರಿಸಲಾಯಿತು.