ದಾವಣಗೆರೆ: ರಾಜ್ಯದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ಅಗೌರವ ತೋರಿಸುತ್ತಿರುವ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋಲಾರ ಮಾಜಿ ಶಾಸಕ ವೈ. ಸಂಪಂಗಿ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಕಾನೂನು ಚೌಕಟ್ಟಿನಲ್ಲಿ ತನಿಖೆಗೆ ಆದೇಶಿಸಿದ್ದಾರೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿ. ಆದರೆ, ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಪಾಲರ ಹುದ್ದೆಯ ಘನತೆ ಅರಿಯದ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಅವಹೇಳನಕಾರಿ ಟೀಕೆ ಮಾಡುತ್ತಿದ್ದಾರೆ. ಚಪ್ಪಲಿ ಹಾರ ಹಾಕುವುದು ಹಾಗೂ ಪ್ರತಿಕೃತಿ ಸುಡುವ ಹೀನ ಕೃತ್ಯಕ್ಕೆ ಇಳಿದಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದೆ ಎಂದು ದೂರಿದರು.
ರಾಜ್ಯಪಾಲರು ಸಾಂವಿಧಾನಿಕ ಅಧಿಕಾರಿಯಾಗಿದ್ದು, ವಾಕ್ ಸ್ವಾತಂತ್ರೃದ ನೆಪದಲ್ಲಿ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ತರುವಂತಹ ಮಾನ ಹಾನಿಕರ ಹೇಳಿಕೆ ನೀಡುವಂತಿಲ್ಲ ಎಂದು ಕೊಲ್ಕತ್ತಾ ಉಚ್ಚ ನ್ಯಾಯಾಲಯ ಆದೇಶಿಸಿದೆ ಎಂಬುದನ್ನು ಉಲ್ಲೇಖಿಸಿದರು.
ಹೀಗಿದ್ದರೂ ಕೆಲವು ಕಾಂಗ್ರೆಸ್ ನಾಯಕರು ರಾಜಭವನಕ್ಕೆ ನುಗ್ಗುವ ಹಾಗೂ ನಿಂದಿಸುವ ಮಾತನಾಡಿದ್ದಾರೆ. ಇಂತಹವರನ್ನು ಗೂಂಡಾ ಕಾಯ್ದೆಯಡಿ ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಅವರು, ಈ ಬಗ್ಗೆ ಬಿಜೆಪಿಯಿಂದ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರಲ್ಲದೆ, ಆರೋಪಗಳಿಂದ ಮುಕ್ತರಾದ ನಂತರ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಮಾತನಾಡಿ, ಕಾಂಗ್ರೆಸ್‌ನವರು ರಾಜ್ಯಪಾಲರಿಗೆ ಅಗೌರವ ತೋರುತ್ತಿರುವುದರ ವಿರುದ್ಧ ಗುರುವಾರ ಬೆಳಗ್ಗೆ 10.30 ಕ್ಕೆ ಜಿಲ್ಲಾ ಬಿಜೆಪಿ ಕಚೇರಿಯಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ. ಸತೀಶ್ ಕೊಳೇನಹಳ್ಳಿ, ಪಾಲಿಕೆ ಸದಸ್ಯ ಶಿವಾನಂದ್ ಪದಾಧಿಕಾರಿಗಳಾದ ಅನಿಲ್‌ನಾಯ್ಕ, ಹನುಮಂತನಾಯ್ಕ, ಆಲೂರು ನಿಂಗರಾಜ್, ಗಂಗಾಧರ್, ವಿಶ್ವಾಸ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.