ದಾವಣಗೆರೆ: ಬಾಲ್ಯದಲ್ಲಿಯೇ ಜೀವನ ಮೌಲ್ಯಗಳನ್ನು ಬಿತ್ತಿದರೆ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಎಚ್.ಕೆ.ಲಿಂಗರಾಜು ಹೇಳಿದರು.
ನಗರದ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜ್ಞಾನಜ್ಯೋತಿ ಶಿಕ್ಷಕಿಯರ ವೇದಿಕೆ, ವನಿತಾ ಸಮಾಜ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲೆಯ 100 ಜನ ಶಿಕ್ಷಕರಿಗೆ ಮೌಲ್ಯ ಶಿಕ್ಷಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮೌಲ್ಯಗಳಿಲ್ಲದ ಬದುಕು ಪ್ರಾಣಿಗಳಿಗಿಂತಲೂ ಕಡೆಯಾಗಲಿದೆ. ಇಂದಿನ ಮಕ್ಕಳಿಗೆ ಮೌಲ್ಯ ಶಿಕ್ಷಣ ಅಗತ್ಯ. ಮಕ್ಕಳ ವಿಕಾಸವಾದಾಗ ಅದು ದೇಶದ ವಿಕಾಸ ಸಮಾಜಕ್ಕೆ ಮೌಲ್ಯವರ್ಧನೆಯ ಕೆಲಸ ಆಗಲಿದೆ. ಮಕ್ಕಳಿಗೂ ಮುನ್ನ ಶಿಕ್ಷಕರಲ್ಲಿ ಮೌಲ್ಯ ಆಚರಣೆ ಆಗಬೇಕು ಎಂದು ಆಶಿಸಿದರು.
ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ, ಆತ್ಮಶಕ್ತಿ, ಆತ್ಮವಿಶ್ವಾಸ, ದೃಢ ಸಂಕಲ್ಪ ಮೊದಲಾದ ಸಾವಿರಾರು ಮೌಲ್ಯಗಳನ್ನು ಅಳವಡಿಸಿಕೊಂಡ ಅನೇಕ ದೇಶಭಕ್ತರಿದ್ದಾರೆ. ಸ್ವಾತಂತ್ರೃಪೂರ್ವದಲ್ಲಿ ಈ ಮೌಲ್ಯಗಳು ಜನಜನಿತವಾಗಿದ್ದವು ಎಂದು ಹೇಳಿದರು.
ಒಂದರಿಂದ 10ನೇ ತರಗತಿಯ ಪಠ್ಯದಲ್ಲಿ 84 ಮೌಲ್ಯಗಳನ್ನು ಅಳವಡಿಸಲಾಗಿದೆ. ಮೌಲ್ಯಗಳನ್ನು ಆಳವಾಗಿ ಬಿತ್ತಬೇಕು. ತಾಯಿಬೇರು ಆಳವಾಗಿದ್ದರೆ ಮರ ಎತ್ತರವಾಗಿರುತ್ತದೆ. ಹೆಮ್ಮರ ಆಳ ಬೇರುಗಳನ್ನು ಬಿಟ್ಟಿರುತ್ತದೆ. ಆಳವಾದ ಜ್ಞಾನ ಸಶಕ್ತ ನಾಗರಿಕರನ್ನು ನಿರ್ಮಿಸುತ್ತದೆ ಎಂದರು.
ಶಾಲೆಯ ಪ್ರಾಚಾರ್ಯ ಕೆ.ಎಸ್.ಪ್ರಭುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈಶ್ವರಮ್ಮ ಶಾಲೆ 42 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣ ಪದ್ಧತಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿದೆ. ಶಾಲೆಯ ಸಂಸ್ಥಾಪಕಿ ಬಿ.ಆರ್.ಶಾಂತಕುಮಾರಿ ಸ್ಮರಣಾರ್ಥ ಮೌಲ್ಯ ಶಿಕ್ಷಣ ಕಾರ್ಯಾಗಾರವನ್ನು ಪ್ರತಿ ವರ್ಷವೂ ನೂರಾರು ಶಿಕ್ಷಕರಿಗೆ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷೆ ಕೆ.ಆರ್.ಸುಜಾತಾ ಕೃಷ್ಣ ಮಾತನಾಡಿ ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ಇಂತಹ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದರೆ ಮೌಲ್ಯಗಳನ್ನು ಮೊದಲು ಮಕ್ಕಳಲ್ಲಿ ಬಿತ್ತಬೇಕು. ಇದು ಈಶ್ವರಮ್ಮ ಶಾಲೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಎಚ್.ಎಸ್.ಮಂಜುನಾಥ್ ಶಿಕ್ಷಣ ಮತ್ತು ಮೌಲ್ಯಗಳು, ಕನ್ನಡ ಭಾಷಾ ಶಿಕ್ಷಕಿ ಬಿ.ಶ್ರೀದೇವಿ, ವಿಜ್ಞಾನ ಶಿಕ್ಷಕಿ ಸವಿತಾ ಎನ್.ಸ್ವಾಮಿ, ಪಾಠಗಳಲ್ಲಿ ಮೌಲ್ಯಗಳ ಸಮನ್ವಯ ವಿಷಯ ಕುರಿತು ಉಪನ್ಯಾಸ ನೀಡಿದರು.
ವಿಶ್ರಾಂತ ಪ್ರಾಚಾರ್ಯೆ ಎ.ಪಿ.ಸುಜಾತಾ, ಮುಖ್ಯ ಶಿಕ್ಷಕಿ ಉಮಾದೇವಿ ಮಾತನಾಡಿದರು. ಜ್ಞಾನಜ್ಯೋತಿ ವನಿತಾ ಶಿಕ್ಷಕಿಯ ವೇದಿಕೆ ಅಧ್ಯಕ್ಷೆ ಜಿ.ಎಸ್.ಶಶಿರೇಖಾ, ಜಯಮ್ಮ ನೀಲಗುಂದ, ಈಶ್ವರಮ್ಮ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್, ಈಶ್ವರಮ್ಮ ಟ್ರಸ್ಟ್ ಕಾರ್ಯದರ್ಶಿ ಜಿ.ಆರ್. ವಿಜಯಾನಂದ್.ಎಸ್.ಎಂ. ಮಲ್ಲಮ್ಮ ಇತರರಿದ್ದರು.