ಜಿಲ್ಲೆ

ಸೌಲಭ್ಯ ವಂಚಿತ ಗಾಣಿಗ ಸಮಾಜ   ಟಿ.ವಿ. ಪ್ರಕಾಶ್ ಹೇಳಿಕೆ   ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ

ದಾವಣಗೆರೆ: ಹಿಂದುಳಿದ ಗಾಣಿಗ ಸಮಾಜ ಪ್ರವರ್ಗ 2ಎ ವ್ಯಾಪ್ತಿಯಲ್ಲಿದ್ದರೂ ಜಾತಿ ಕಾಲಂನಲ್ಲಿ ಸರಿಯಾಗಿ ನಮೂದಿಸದ ಕಾರಣಕ್ಕೆ ಅನೇಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ನಿವೃತ್ತ ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ವಿಷಾದಿಸಿದರು.
ಗಾಣಿಗ ಸಮಾಜದ ಜಿಲ್ಲಾ ಮಹಿಳಾ ಘಟಕದಿಂದ ನಗರದ ಜಿಲ್ಲಾ ಗಾಣಿಜ ಸಮಾಜದ ಕಚೇರಿ ಬಳಿ ಭಾನುವಾರ, ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪ್ರತಿಭಾನ್ವಿತರಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಗಾಣಿಗ  ವಧು ವರರ ಸಮಾವೇಶ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಕೆಲವರು ‘ಹಿಂದು ಗಾಣಿಗ’ ಸೇರಿ ಇತರೆ ಹೆಸರುಗಳನ್ನು ಜಾತಿ ಕಲಂನಲ್ಲಿ ಬರೆಸುತ್ತಿದ್ದಾರೆ. ಹೀಗಾಗಿ ರಾಜ್ಯದ ಕೆಲವೆಡೆ ಸಮಾಜದವರಿಗೆ 2ಎ ಪ್ರಮಾಣಪತ್ರ ಸಿಗುತ್ತಿಲ್ಲ. ಇದನ್ನು ತಪ್ಪಿಸಲು ‘ಗಾಣಿಗ‘ ಎಂದೇ ಬರೆಸಬೇಕು ಎಂದು ಮನವಿ ಮಾಡಿದರು.
ಗಾಣಿಗ ಸಮಾಜದ ಮಕ್ಕಳು ಓದಿನ ಹೊರತಾಗಿ ಸ್ವಾವಲಂಬಿಯಾಗಿ ನಿಲ್ಲಲು ಸಾಧ್ಯವಿಲ್ಲ. ಐಎಎಸ್, ಕೆೆಎಎಸ್ ಮೊದಲಾದ ಉನ್ನತ ವ್ಯಾಸಂಗಗಳತ್ತ ಗಮನ ಹರಿಸಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಸನ್ಮಾನಿತರಾದ ನಟ, ನಿರ್ಮಾಪಕ ಮಹಾಂತೇಶ್ ಚೊಳಚಗುಡ್ಡ ಮಾತನಾಡಿ ಇಂದಿನ ಸಿನಿಮಾಗಳು ಲವ್, ಹೊಡಿಬಡಿ ಸಂಸ್ಕೃತಿಯನ್ನು ಬಿಂಬಿಸುತ್ತಿವೆ. ಕೌಟುಂಬಿಕ ಆಧಾರಿತ ಚಿತ್ರಗಳು ಕಡಿಮೆಯಾಗಿವೆ. ಮದುವೆ ನಂತರದಲ್ಲಿ ಮಕ್ಕಳು ಪಾಲಕರನ್ನು ನಿರ್ಲಕ್ಷಿಸುವ ಭಾವನೆ ಹೆಚ್ಚಿದೆ. ಹೆತ್ತವರನ್ನು ಗೌರವಿಸುವ ಸಂದೇಶವುಳ್ಳ ‘ದೇಸಾಯಿ’ ಸಿನಿಮಾ ಜೂ. 21ರಂದು ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರ ನೋಡಿ ಹರಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ದೇಸಾಯಿ ಚಿತ್ರದ ನಾಯಕ ನಟ ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು. ಚಿತ್ರದುರ್ಗದ ಉದ್ಯಮಿ ಡಿ.ಎಸ್.ಸುರೇಶ್‌ಬಾಬು, ಕೀಲುಮೂಳೆ ತಜ್ಞ ಡಾ.ಜಿ.ಸಿ.ಬಸವರಾಜ್, ಗಾಣಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ  ಉಮಾ ವೀರಭದ್ರಪ್ಪ ಹಾಗೂ ಪದಾಧಿಕಾರಿಗಳಿದ್ದರು.  
---