ದಾವಣಗೆರೆ: ಕುಟುಂಬ ನಿರ್ಲಕ್ಷಿತ ನಿವೃತ್ತ ನೌಕರರ ನೆರವಿಗೆ ಸರ್ಕಾರಿ ನೌಕರರ ಸಂಘ ಚಿಂತನೆ ಮಾಡಬೇಕೆಂದು ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಸರ್ಕಾರಿ ನೌಕರರ ಜಿಲ್ಲಾ ಘಟಕದಿಂದ ದಾವಣಗೆರೆ-ಚಿತ್ರದುರ್ಗ ಸರ್ಕಾರಿ ನೌಕರರ ಎಸ್ಸೆಸ್ಸೆಲ್ಸಿ-ಪಿಯು ಮಕ್ಕಳಿಗೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತಾಯಿಯೊಬ್ಬರಿಗೆ ತಲಾ 5 ಸಾವಿರ ರೂ. ನೀಡಬೇಕೆಂಬ ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿದ ಇಬ್ಬರು ಗಂಡುಮಕ್ಕಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಮಾತೃದೇವೋಭವ, ಪಿತೃದೇವೋಭವ ಎಂಬುದನ್ನು ಉಲ್ಲೇಖಿಸಿ ನಿಗದಿತ ಸಮಯದೊಳಗೆ ಹಣ ನೀಡುವಂತೆ ತಾಕೀತು ಮಾಡಿದ್ದರು ಎಂದು ಸ್ಮರಿಸಿದ ಶ್ರೀಗಳು ನಿವೃತ್ತ ನೌಕರರ ಬದುಕು ಹೀಗೆ ನರಕಸದೃಶವಾಗಿ ಇರಲಿದೆ ಎಂದು ವಿಷಾದಿಸಿದರು.
ಚಿತ್ರನಟ-ನಟಿಯರು ವಿದ್ಯಾರ್ಥಿಗಳಿಗೆ ಆದರ್ಶವಾಗಬಾರದು. ಸಿನಿಮಾ ಕುರಿತ ಪ್ರಶ್ನೆಪತ್ರಿಕೆ ಇದ್ದರೆ 100 ಕ್ಕೆ 200 ಅಂಕ ಗಳಿಸುತ್ತೀರಿ. ವಯಸ್ಸಿನ ಸಹಜತೆಯಿಂದ ನಟನಟಿಯರೇ ಆದರ್ಶವಾಗಿದ್ದಾರೆ. ಕಲಾರಾಧನೆ ತಪ್ಪಲ್ಲ. ಆದರೆ ವೈಯಕ್ತಿಕ ಜೀವನದಲ್ಲಿ ಸಿನಿಮಾದಲ್ಲಿನ ಅತೃಪ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಯಾವುದು ಸರಿ ಎಂಬುದನ್ನು ವಿವೇಚನೆ ಮಾಡಿ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಲ್ಲಿ ಅಭಿರುಚಿ, ಆಸಕ್ತಿ ಇದ್ದಾಗ ಸಾಧನೆ ಮಾಡಲು ಸಾಧ್ಯ. ಮಕ್ಕಳು ತಮ್ಮ ಜೀವನದ ಹೆಜ್ಜೆ ಗುರುತನ್ನು ಕಂಡುಕೊಳ್ಳಬೇಕು. ನಿರಂತರ ಚಿಂತನೆ, ಸರಿ-ತಪ್ಪುಗಳ ವಿವೇಚನೆ, ಆತ್ಮಸಾಕ್ಷಿ ಪ್ರಜ್ಞೆಯೊಂದಿಗೆ ಪ್ರಶ್ನೆ ಹಾಕಿಕೊಂಡು ಮುನ್ನಡೆಯಬೇಕು. ಪಾಲಕರು ಕೂಡ ಮಕ್ಕಳನ್ನು ಹಂಗಿಸಬಾರದು. ಇನ್ನೊಂದು ಮಗುವನ್ನು ಹೋಲಿಸಬಾರದು. ಪ್ರತಿ ಮಗುವಿನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಗಳನ್ನು ಉಳಿಸಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದೊಡ್ಡ ಸಂಘಟನೆಯಾದ ಸರ್ಕಾರಿ ನೌಕರರ ಸಂಘ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ನಗರ, ಗ್ರಾಮೀಣ ಪ್ರದೇಶದಲ್ಲಿ ಮುಚ್ಚುವ ಹಂತದಲ್ಲಿರುವ ಸರ್ಕಾರಿ ಶಾಲೆಗಳ ರಕ್ಷಣೆಗೆ ನಿಲ್ಲಬೇಕಿದೆ. ವೈಯಕ್ತಿಕ ಜವಾಬ್ದಾರಿ ವಹಿಸಿ ಅಭಿವೃದ್ಧಿ ಪಡಿಸಬೇಕು. ನಾವು ಸಹ ಬೆಂಬಲ ನೀಡಲಿದ್ದೇವೆ ಎಂದರು.
ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿಗೊಳಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲೂ ಹೇಳಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಅವರು ಇದನ್ನು ಕಾರ್ಯಗತಗೊಳಿಸುವ ವಿಶ್ವಾಸವಿದೆ ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ನಗದು ರಹಿತ ಆರೋಗ್ಯ ಸೇವೆ ನೀಡುವ ಜ್ಯೋತಿ ಸಂಜೀವಿನಿ ಯೋಜನೆ ಆಗಸ್ಟ್‌ನಿಂದ ಜಾರಿಗೆ ಬರಲಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಎಚ್. ಗಿರಿಗೌಡ, ರಾಜ್ಯ ಖಜಾಂಚಿ ವಿ.ವಿ. ಶಿವರುದ್ರಯ್ಯ, ಗೌರವಾಧ್ಯಕ್ಷ ಎಸ್.ಬಸವರಾಜು, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ, ದಾವಣಗೆರೆ ಜಿಲ್ಲಾಧ್ಯಕ್ಷ ವೀರೇಶ್ ಒಡೇನಪುರ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಎಸ್ಪಿ ಉಮಾ ಪ್ರಶಾಂತ್ ಇತರರಿದ್ದರು.
ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಸರ್ಕಾರಿ ನೌಕರರ 400 ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.