ಜಿಲ್ಲೆ

ಎಜಿಬಿ ಕಾಲೇಜು ತಂಡಗಳಿಗೆ ಟೇಬಲ್‌ ಟೆನ್ನಿಸ್ ಪ್ರಶಸ್ತಿ

ಡಿ. ಎಂ. ಮಹೇಶ್

ದಾವಣಗೆರೆ: ನಗರದ ಎಜಿಬಿ ಪ್ರಥಮ ದರ್ಜೆ ಕಾಲೇಜಿನ ಉಭಯ ತಂಡಗಳೂ ದಾವಣಗೆರೆ ವಿವಿ ಮಟ್ಟದ ಅಂತರ ಕಾಲೇಜು ಮಟ್ಟದ ಪುರುಷರು ಹಾಗೂ ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿವೆ.

ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ದಾವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಸಹಯೋಗದಲ್ಲಿ ನಗರದ ಧರಾಮ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಂದ್ಯಾವಳಿಯಲ್ಲಿ ಎಜಿಬಿ ಕಾಲೇಜು ಎರಡೂ ವಿಭಾಗದಲ್ಲಿ ಪ್ರಶಸ್ತಿ ಕಾಯ್ದುಕೊಂಡಿತು.

ಉಳಿದಂತೆ ಧರಾಮ ಕಾಲೇಜಿನ ಉಭಯ ತಂಡಗಳೂ ಕೂಡ ಎರಡೂ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದವು. ಪುರುಷರ ವಿಭಾಗದಲ್ಲಿ ಹೊಸದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳಲ್ಕೆರೆಯ ಸರ್ಕಾರಿ ಕಾಲೇಜು ತಂಡಗಳು ಕ್ರಮವಾಗಿ ತೃತೀಯ ಹಾಗೂ ಚತುರ್ಥ ಸ್ಥಾನ ಪಡೆದವು.

ಮಹಿಳೆಯರ ವಿಭಾಗದಲ್ಲಿ ಎವಿಕೆ ಮಹಿಳಾ ಕಾಲೇಜು ತೃತೀಯ ಸ್ಥಾನ, ಹೊಸದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕನೇ ಸ್ಥಾನ ಪಡೆದುಕೊಂಡಿತು.

ಸಂಜೆ ನಡೆದ ಸಮಾರೋಪದಲ್ಲಿ ಧರಾಮ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ಎಂ.ಪಿ. ರೂಪಶ್ರೀ, ದಾವಿವಿ ಸಿಂಡಿಕೇಟ್ ಸದಸ್ಯ ಎಚ್. ತಿಪ್ಪೇಸ್ವಾಮಿ, ದಾವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಉಪಾಧ್ಯಕ್ಷ ಬಸವರಾಜ ವಿ. ದಮ್ಮಳ್ಳಿ ಹಾಗೂ ಇತರರು ಬಹುಮಾನ ವಿತರಿಸಿದರು.

* ಹುದ್ದೆಗೆ ಸೀಮಿತವಾದ ಕ್ರೀಡಾ ಕೋಟಾ

ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್. ಮುರಿಗೇಂದ್ರಪ್ಪ, ಇಂಜಿನಿಯರಿಂಗ್, ವೈದ್ಯಕೀಯ ಇತರೆ ಹುದ್ದೆಗಳನ್ನು ಪಡೆಯಲು ಕ್ರೀಡಾ ಕೋಟಾವನ್ನು ಬಳಸಲಾಗುತ್ತಿದೆ. ಹೀಗೆ ಲಾಭ ಪಡೆಯುವವರು ನಂತರದ ದಿನಗಳಲ್ಲಿ ಕ್ರೀಡೆಗಳಲ್ಲಿ ಮುಂದುವರಿಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ಮತ್ತು ಕ್ರೀಡೆಯನ್ನೂ ಪರ್ಯಾಯವಾಗಿ ಕಲಿಯಬೇಕು. ಇತ್ತೀಚೆಗೆ ಕ್ರೀಡೆಗಳಿಗೆ ಹೆಚ್ಚಿನ ಪ್ರಾಧಾನ್ಯ ಸಿಗುತ್ತಿಲ್ಲ. ಕ್ರೀಡಾಭ್ಯಾಸ ಎಲ್ಲರ ಜೀವನದಲ್ಲಿಯೂ ಮುಖ್ಯವಾಗಬೇಕು ಎಂದು ಆಶಿಸಿದರು.

ಕ್ರೀಡಾಕೂಟ ಉದ್ಘಾಟಿಸಿದ ಕಿವಿಮೂಗು ಗಂಟಲು ತಜ್ಞ ಡಾ. ಎ.ಎಂ. ಶಿವಕುಮಾರ್ ಮಾತನಾಡಿ ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ. ಆದರೆ ಗೆದ್ದವರು ತಮ್ಮ ಗೆಲುವಿಗೆ ಸಾಧ್ಯವಾದ ಅಂಶಗಳನ್ನು ಸೋತವರಿಗೆ ವಿವರಿಸಿದಲ್ಲಿ ಮುಂದಿನ ದಿನಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಸಹಕಾರಿ ಆಗಬಹುದು ಎಂದರಲ್ಲದೆ ನಿತ್ಯ ಜೀವನದಲ್ಲಿ ದೈಹಿಕ ಚಟುವಟಿಕೆಗೆ ಆದ್ಯತೆ ನೀಡಿ ಎಂದರು.

ದಾವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಖಜಾಂಚಿ ಡಾ. ಡಿ.ಆರ್. ಪ್ರಸನ್ನಕುಮಾರ, ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಸಜಿನ ದೈಹಿಕ ಶಿಕ್ಷಣ ನಿರ್ದೇಶಕ ಹರೀಶ್, ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕರಿಸಿದ್ದಯ್ಯ ಒಡೆಯರ್, ಹರಿಹರ ಸರ್ಕಾರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸಿ. ಚಂದ್ರಶೇಖರ್, ಡಾ.ಮಂಜುರಾಜ್, ಡಾ.ಪಿ.ಎನ್. ಪ್ರಶಾಂತ್‌ಕುಮಾರ್, ಡಾ. ಗಿರಿಮಲ್ಲೇಶ್ವರ ಬಗರಿ ಇತರರಿದ್ದರು.

---