ದಾವಣಗೆರೆ: ಚಳವಳಿಗಳಲ್ಲಿ ಪ್ರಯೋಗಶೀಲ ಗುಣಧರ್ಮವಿರಬೇಕು. ಇಲ್ಲವಾದರೆ ಹೋರಾಟಗಾರರಲ್ಲಿ ಸನಾತನಿ ಬೀಜ ಮೊಳಕೆಯೊಡೆದು ಚಳವಳಿ ದುರ್ಬಲವಾಗುವ ಅಪಾಯವಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ರಾಜ್ಯ ಸಮಿತಿಯಿಂದ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ನಾಯಕತ್ವ ವಿಕಸನ ಅಧ್ಯಯನ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅಪಾಯಕಾರಿಯಾಗಿ ಬೆಳೆಯುತ್ತಿರುವ ಧರ್ಮಾಂಧ, ಕೋಮುವಾದಿ ಶಕ್ತಿಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಇಂತಹ ಅಧ್ಯಯನ ಶಿಬಿರಗಳು ಹೆಚ್ಚು ನಡೆಯಬೇಕು. ಪ್ರತಿಯೊಬ್ಬ ಕಾರ್ಮಿಕನಲ್ಲಿ ಪ್ರಯೋಗಶೀಲತೆ ಬಿತ್ತಲು ಶಿಬಿರಗಳು ಸಹಕಾರಿಯಾಗಲಿವೆ ಎಂದರು.
ಕಾರ್ಮಿಕರ ಸಂಕೇತ ಕೆಂಪು ಬಣ್ಣವೇ ಹೊರತು ಕೇಸರಿ ಅಲ್ಲ. ಕೆಂಪು ಬಣ್ಣ ಕ್ರಾಂತಿ-ಶಾಂತಿ ಹಾಗೂ ಉತ್ಕೃಷ್ಟತೆಯ ದ್ಯೋತಕವಾದರೆ ಕೇಸರಿ ಗುಲಾಮಗಿರಿಯ ಸಂಕೇತವಾಗಿದೆ. ಇದನ್ನು ಕಾರ್ಮಿಕರು ಅರ್ಥೈಸಿಕೊಂಡು ಉತ್ಕೃಷ್ಟ ಚಿಂತನೆಗಳ ಮೂಲಕ ಚಳವಳಿಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಮುನ್ನಡೆಸಬೇಕು ಎಂದು ಹೇಳಿದರು.
ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್ ಮಾತನಾಡಿ ಕಾರ್ಮಿಕರು ಸಂಘಟನೆ ಮತ್ತು ಚಳವಳಿಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಶಿಬಿರ ಅನುಕೂಲ ಕಲ್ಪಿಸಲಿದೆ. ಪ್ರೊ.ಎ.ಬಿ.ರಾಮಚಂದ್ರಪ್ಪ, ಡಾ.ಸಿದ್ದನಗೌಡ ಪಾಟೀಲ್, ಸತ್ಯಾನಂದ, ಅಮ್ಜದ್ ಮೊದಲಾದ ವಿಷಯ ಪರಿಣಿತರು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ಜಿ. ಉಮೇಶ್ ಆವರಗೆರೆ, ಕಾರ್ಯದರ್ಶಿ ಆವರಗೆರೆ ಚಂದ್ರು, ಅಂಗನವಾಡಿ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ, ಬಿಸಿಯೂಟ ಫೆಡರೇಷನ್ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ್, ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟದ ಸದಸ್ಯೆ ದಿವ್ಯಾ ಬಿರಾದಾರ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ವಾಸು, ಎಂ.ಬಿ.ಶಾರದಮ್ಮ, ಮೊಹಮ್ಮದ್ ರಫಿಕ್, ದಾದಾಪೀರ್ ಇತರರಿದ್ದರು.
-