ಜಿಲ್ಲೆ

ಹೆಣ್ಣುಮಕ್ಕಳಿಗಿರಲಿ ನಾಯಕತ್ವ ಗುಣ   ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದಲ್ಲಿ ಎಸ್ಪಿ ಉಮಾ ಪ್ರಶಾಂತ್ ಅನಿಸಿಕೆ

ಡಿ. ಎಂ. ಮಹೇಶ್

ದಾವಣಗೆರೆ: ವಿದ್ಯಾರ್ಥಿನಿಯರು ನಾಯಕತ್ವ ಗುಣ ಹಾಗೂ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೇಳಿದರು.
ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಪದವಿಗೆ ಸೀಮಿತವಾಗಿ ವ್ಯಾಸಂಗ ಮೊಟಕುಗೊಳಿಸದೆ, ಸ್ನಾತಕೋತ್ತರ ಪದವಿ ಪಡೆಯುವತ್ತಲೂ ವಿದ್ಯಾರ್ಥಿನಿಯರು ಗಮನ ಹರಿಸಬೇಕು. ಮೊಬೈಲನ್ನು ಧನಾತ್ಮಕ ವಿಚಾರಗಳಿಗೆ ಮಾತ್ರ ಬಳಸುವ ವಿವೇಚನೆ ಇರಲಿ ಎಂದು ಸಲಹೆ ನೀಡಿದರು.
ನಿಮ್ಮ ಸುರಕ್ಷತೆಗಾಗಿ, ರಸ್ತೆ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿ. ಅಪರಿಚಿತರೊಂದಿಗೆ ಅನಗತ್ಯ ಒಟಿಪಿ ಮಾಹಿತಿ ಹಂಚಿಕೊಳ್ಳದಿರಿ ಮತ್ತು ಆನ್‌ಲೈನ್ ಲಿಂಕ್‌ಗಳನ್ನು ಸ್ಪರ್ಶಿಸಿ ಸೈಬರ್ ಅಪರಾಧಕ್ಕೆ ಒಳಗಾಗಬೇಡಿ ಎಂದು ತಿಳಿಸಿದರು.
ಯಾವುದೇ ಅಪರಾಧ, ಅಪಘಾತ ನಡೆದಲ್ಲಿ ಮುಜುಗರವಿಲ್ಲದೆ ಪೊಲೀಸ್ ಠಾಣೆಗೆ ದೂರನ್ನು ನೀಡಿ, ಯಾವುದೇ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ಎಂದು ಸಲಹೆ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಮಾತನಾಡಿ ಎನ್. ಅಂಬಿಕಾ ಛಲ ಮತ್ತು ದೃಢ ನಿರ್ಧಾರದಿಂದಾಗಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಐಪಿಎಸ್‌ನಲ್ಲಿ ತೇರ್ಗಡೆಯಾಗಿ ಮುಂಬೈನಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಮನೋಬಲ ಹುಡುಗಿಯರಲ್ಲಿ ಬೇಕು. ಭವಿಷ್ಯದ ಕರ್ತವ್ಯ ನಿರ್ವಹಣೆಯಲ್ಲಿ ಸಮಯಪಾಲನೆಗೆ ಮಹತ್ವ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ಪ್ರಾಚಾರ್ಯೆ ಕಮಲಾ ಸೊಪ್ಪಿನ್, ಎವಿಕೆ ಮಹಿಳಾ ಪಪೂ ಕಾಲೇಜಿನ ಪ್ರಾಚಾರ್ಯ ರವಿ ಬಣಕಾರ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ರಣಧೀರ, ಎನ್ನೆಸ್ಸೆಸ್ ಘಟಕ ಕಾರ್ಯಕ್ರಮಾಧಿಕಾರಿ ಡಾ.ಪಿ. ವಿಶ್ವನಾಥ, ರೇಂಜರ್ ಅಧಿಕಾರಿ ಎಲ್. ಉಷಾ, ಕ್ರೀಡಾ ಸಂಚಾಲಕ ಆರ್. ಚನ್ನಬಸವನಗೌಡ, ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರಭಾವತಿ ಎಸ್. ಹೊರಡಿ, ಸಾಂಸ್ಕೃತಿಕ ಸಮಿತಿ ಸಂಯೋಜಕಿ ಡಾ.ಆರ್.ಜಿ.ಕವಿತಾ, ಕಲಾ ವಿಭಾಗದ ಕಾರ್ಯದರ್ಶಿ ಕೆ.ಎಂ. ಲಕ್ಷ್ಮೀ, ವಿಜ್ಞಾನ  ವಿಭಾಗದ ಕಾರ್ಯದರ್ಶಿ ನೂರ್ ಫಾತಿಮಾ, ವಾಣಿಜ್ಯ ವಿಭಾಗದ ಕಾರ್ಯದರ್ಶಿ ಕೆ. ನಿಸರ್ಗಾ ಇದ್ದರು.
ಎಂ. ಸಹನಾ ಸಂಗಡಿಗರು ಪ್ರಾರ್ಥಿಸಿದರೆ, ರಕ್ಷಾ ವಿ. ಆನಂದ್ ಸ್ವಾಗತಿಸಿದರು. ಡಿ.ಎಂ. ಕಾವ್ಯಶ್ರೀ ವಂದಿಸಿದರು. ಸಹನಾ ಸಾವಳಗಿ. ಕೆ.ಎಂ. ಲಕ್ಷ್ಮೀ ಸಂಗಡಿಗರು ಕಾರ್ಯಕ್ರಮ ನಿರ್ವಹಿಸಿದರು.