ಜಿಲ್ಲೆ

ಸಾಮರಸ್ಯಕ್ಕೆ ದೇಗುಲಗಳೇ ನಾಂದಿ

ಡಿ. ಎಂ. ಮಹೇಶ್

ದಾವಣಗೆರೆ: ಭಕ್ತರು ತಾರತಮ್ಯವಿಲ್ಲದೆ ಭಕ್ತಿ ಸಮರ್ಪಿಸಲು ಕಾರಣವಾಗುವ ದೇಗುಲಗಳಿಂದ ಸಾಮಾಜಿಕ ಸಾಮರಸ್ಯ ವೃದ್ಧಿಯಾಗಲಿದೆ ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಕಾಶಿಪುರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಕಾಶಿಲಿಂಗೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಶಾರೋಹಣ, ಪೂರ್ಣಶಿಲಾ ದೇವಸ್ಥಾನದ ಶುಭಾರಂಭದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಊರಿನ ದೇವರುಗಳ ಸಾಕ್ಷಿಯಾಗಿ ಊರಿನ ನ್ಯಾಯ ನಿರ್ಣಯ ನಡೆಯುತ್ತಿದ್ದವು. ಇದರ ಮೂಲಕ ವ್ಯಾಜ್ಯಗಳು ತೀರ್ಮಾನವಾಗುತ್ತಿದ್ದ ಸನಾತನ ಸಂಸ್ಕೃತಿ ನಮ್ಮದು. ದೀನ ದುರ್ಬಲರಿಗೆ ಸಹಾಯ ಮಾಡುವ ಪರಂಪರೆ ನಮ್ಮದು. ಭಗವಂತ ಪ್ರತಿಷ್ಠಾಪನೆಗೊಂಡ ಪವಿತ್ರ ಕ್ಷೇತ್ರದಲ್ಲಿ ದುಶ್ಚಟಗಳಿಗೆ ಆಸ್ಪದವಿಲ್ಲದಂತೆ ನೋಡಿಕೊಳ್ಳಬೇಕು ಎಂದರು.

ಕಾಶಿ ಕ್ಷೇತ್ರದಿಂದಲೇ ಈಶ್ವರಲಿಂಗ ತಂದು 3 ಕೋಟಿ ರೂ.ಗೂ ಅಧಿಕ ವೆಚ್ಚದ ಸಂಪೂರ್ಣ ಶಿಲಾ ಕೆತ್ತನೆಯ ಈ ದೇವಸ್ಥಾನ ನಿರ್ಮಾಣಕ್ಕೆ ಜಾತಿ ಮತ ಭೇದವಿಲ್ಲದೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ನೆರವು ನೀಡಿದ್ದಾರೆ. ಗ್ರಾಮದವರಲ್ಲದೆ ಸುತ್ತಮುತ್ತಲಿನ ಕ್ಯಾಂಪು ಗಳವರೂ, ಇತರರೂ ಸಹಕರಿಸಿದ್ದಾರೆ ಎಂದು ಸ್ಮರಿಸಿದರು.

ಸನಾತನ ಧರ್ಮ ಮತ್ತು ದೇವಾಲಯ ಸಂಸ್ಕೃತಿ ಬಗ್ಗೆ ಪ್ರಧಾನ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಬದುಕಿನ ಭರವಸೆಗಾಗಿ ದೈವ ಕೃಪೆ ನಿರೀಕ್ಷೆಗೆ ದೇವಾಲಯಗಳು ಕಾರಣವಾಗಲಿವೆ. ಅಲ್ಲದೇ ನಮ್ಮ ಸನಾತನ ಸಂಸ್ಕೃತಿಯ ಮೌಲ್ಯಗಳ ಪ್ರತಿಪಾದನೆಗೂ ದೇವಾಲಯ ಸಂಸ್ಕೃತಿಯಲ್ಲಿ ಅವಕಾಶವಿದೆ ಎಂದರು.

ಅನೇಕ ವಿದೇಶೀಯರೂ ಭಾರತೀಯ ಸಂಸ್ಕೃತಿಯ ಮಹತ್ವ ಅರಿತು ಆಚರಿಸಲು ನಮ್ಮ ದೇಶಕ್ಕೆ ಬರುತ್ತಿದ್ದು ನಮ್ಮಲ್ಲೇ ಕೆಲವರು ಸನಾತನ ಧರ್ಮವನ್ನು ಹಾದಿ ತಪ್ಪಿಸಲು ಹೊರಟು ತಾವೇ ಹಾದಿ ತಪ್ಪುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬನವಾಸಿ ಕದಂಬ ಸಿಂಹ ಲಾಂಛನದ ದೊರೆ ರವಿವರ್ಮನು ತ್ರಯಂಬಕ ದೇವರಿಗೆ ಹೊಳಲಕೆರೆಯ ದುಮ್ಮಿ ಮುಂತಾದ ಗ್ರಾಮಗಳನ್ನು ದತ್ತಿ ಕೊಟ್ಟಿರುವ ಬಗ್ಗೆ ಉಲ್ಲೇಖವುಳ್ಳ ತಾಮ್ರ ಶಾಸನಸ್ಥ ಗ್ರಾಮ ಕಾಶೀಪುರವು ಪುರಾತನ ಐತಿಹ್ಯ ಹೊಂದಿದೆ. ಈ ದೇವಾಲಯವು ಆಗಮಗಳ ಅನುಸಾರವಾಗಿಯೇ ನಿರ್ಮಾಣಗೊಂಡಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ ಹಿಂದೆಲ್ಲ ಕಷ್ಟಪಟ್ಟಾದರೂ ಕಾಶಿ ಯಾತ್ರೆಗೆ ಹೋಗುತ್ತಿದ್ದರು. ಈಗ ಕಾಶಿಗೆ ಹೋಗಲಾರದವರು ಈ ಕಾಶಿಪುರಕ್ಕೆ ಬಂದು ಕಾಶಿ ವಿಶ್ವನಾಥನ ದರ್ಶನ ಪಡೆಯಬಹುದು ಎಂದರು. ಶಿಲ್ಪಿ ರಾಜೇಶ್ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟಿನ ಅಧ್ಯಕ್ಷ ಶೇಖರಪ್ಪ, ಸಿದ್ದೇಶ್ ಕಾಶಿಪುರ, ಓಂಕಾರ ಗೌಡ, ಗೋಪಾಲ್ ಗೌಡ, ಮಹೇಶ್, ಜಗದೀಶ್, ಚೇನ್ ಇದ್ದರು. ಗುರುಮೂರ್ತಿ ಸ್ವಾಗತಿಸಿದರು. ಕೆ. ವಿಶ್ವನಾಥ್ ಕಾರ್ಯಕ್ರಮ ನಿರ್ವಹಿಸಿದರು.