ದಾವಣಗೆರೆ: ರಾಜ್ಯದ ಎಲ್ಲ ರಂಗಾಯಣಗಳ ನಾಟಕ ತರಬೇತಿ ಶಾಲೆ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ನಿರ್ಮಾಣ ಆಗಬೇಕು ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು.
ವೃತ್ತಿ ರಂಗಭೂಮಿ ರಂಗಾಯಣದಿಂದ ನಗರದ ಬಾಪೂಜಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವರ್ತಮಾನದ ವೃತ್ತಿ ರಂಗಭೂಮಿ, ಬಿಕ್ಕಟ್ಟು ಮತ್ತು ಪರಿಹಾರದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ದಾವಣಗೆರೆ ರಂಗಾಯಣಕ್ಕೆ ಕೊಂಡಜ್ಜಿಯಲ್ಲಿ 10 ಎಕರೆ ಜಮೀನು ನೀಡಿದ್ದು, ಇಲ್ಲಿ ಮ್ಯೂಜಿಯಂ ನಿರ್ಮಿಸುವುದು ಅವಶ್ಯಕ. ಆ ಮೂಲಕ ಕನ್ನಡ ವೃತ್ತಿ ರಂಗಭೂಮಿಯ ಮೇರು ಕಲಾವಿದರನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ನೀನಾಸಂ, ರಂಗಾಯಣ ಸೇರಿ ರಾಜ್ಯದ ಹಲವು ರಂಗಶಾಲೆ ಹಾಗೂ ಗ್ರಾಮೀಣ ಪ್ರತಿಭೆ ತರಬೇತಿ ಶಾಲೆಗೆ ಆಯ್ಕೆ ಮಾಡಿಕೊಳ್ಳಬೇಕು. ರಂಗ ಪ್ರಯೋಗಗಳಿಗೆ ಕಟ್ಟಡ ನಿರ್ಮಿಸಿದರೆ ಸ್ಥಾವರ ಆಗಲಿದ್ದು, ನಿರ್ವಹಣೆ ವೆಚ್ಚವೂ ಬಹಳ ಕಷ್ಟ. ಹಾಗಾಗಿ, ಬಯಲು ರಂಗ ಮಂದಿರ ಸ್ಥಾಪನೆ ಸೂಕ್ತ ಎಂದರು.
ಸರ್ಕಾರ ರಾಜ್ಯದ 30 ಜಿಲ್ಲೆಗಳ ರಂಗಾಯಣಗಳಿಗೆ ತಲಾ 2 ಕೋಟಿ ರೂ.ಗಳಂತೆ 60 ಕೋಟಿ ರೂ. ಅನುದಾನ ಒದಗಿಸಬೇಕು. ವೃತ್ತಿ, ಆಧುನಿಕ ಹಾಗೂ ಹವ್ಯಾಸಿ ರಂಗ ಪ್ರಯೋಗಶೀಲತೆಗೆ ಭದ್ರ ಬುನಾದಿ ಹಾಕಬೇಕು ಹೇಳಿದರು.
ಪ್ರಸ್ತುತ ಕನ್ನಡ ಚಲನಚಿತ್ರ ಉದ್ಯಮದ ಕಾಲ ಈಗ ಮುಗಿದು ಹೋಗಿದ್ದು, ಜನತೆ ನೇರ ವೀಕ್ಷಣೆ ಬಯಸುತ್ತಿದ್ದಾರೆ. ವೃತ್ತಿ ರಂಗಭೂಮಿ ಹೊಸ ಪ್ರಯೋಗಗಳ ಮೂಲಕ ಸಾಹಿತ್ಯ, ಸಂಗೀತ, ನೃತ್ಯದ ರಸಾನುಭವ ಸೃಷ್ಠಿಸಬೇಕು ಎಂದರು.
ರಂಗಭೂಮಿ ಬಿಸಿನೆಸ್ ಆಗಬಾರದು. ಕಲೆ ವ್ಯವಹಾರವಾದರೆ ಹಣದ ವ್ಯಾಮೋಹ ಬರಲಿದೆ. ನಾಟಕಗಳ ಮೂಲಕ ಸಾಹಿತ್ಯ, ಸಂಗೀತ, ನೃತ್ಯ ಹಾಗೂ ಪರಂಪರೆ ಜನರಿಗೆ ತಲುಪಲಿದ್ದು, ಸದಭಿರುಚಿಯ ನಾಟಕಗಳನ್ನು ಪ್ರದರ್ಶಿಸಿದರೆ ಜನತೆ ಖಂಡಿತ ರಂಗಭೂಮಿಯತ್ತ ಬರಲಿದ್ದಾರೆ ಎಂದು ಹೇಳಿದರು.
ನಾಟಕ ಕಂಪನಿ ಪರಂಪರೆ ಮತ್ತು ಪ್ರಯೋಗಶೀಲತೆ ಕುರಿತು ಡಾ.ಪ್ರಕಾಶ ಗರುಡ ಮಾತನಾಡಿ, ವೃತ್ತಿ ರಂಗಭೂಮಿ ಬದಲಾವಣೆ ಪ್ರಯೋಗಶೀಲತೆಯಿಂದಲೇ ಆಗಬೇಕು. ನಮ್ಮ ಎರಡು ಮತ್ತು ಮೂರನೇ ಪೀಳಿಗೆ ವೃತ್ತಿ ರಂಗಭೂಮಿಗೆ ಬರಲು ಪರದಾಡುತ್ತಿದ್ದು, ನಿರಂತರ ತರಬೇತಿ ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ನಗರದ ಗ್ಲಾಸ್‌ಹೌಸ್‌ನಲ್ಲಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಆಯೋಜಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ರಂಗಕರ್ಮಿ ಎಲ್.ಬಿ.ಷೇಕ್ ಮಾಸ್ತರ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಬಸವರಾಜ ಬೆಂಗೇರಿ ಹಾಗೂ ರಂಗ ಪರಿಕರ ಮತ್ತು ರಂಗಸಜ್ಜಿಕೆ ಕುರಿತು ಕಲಾವಿದ ಅರುಣ್ ಸಾಗರ್ ಮಾತನಾಡಿದರು. ಶ್ರೀಧರ್ ಹೆಗಡೆ ಇದ್ದರು.
ಕಲಾವಿದ ಬಸವನಗೌಡ ಮತ್ತು ಸಂಗಡಿಗರು ನಾಂದಿಗೀತೆ ಹಾಡಿದರು. ರಂಗಾಯಣ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸಿದರು, ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪ್ರಾಸ್ತಾವಿಕ ಮಾತನಾಡಿದರು.
----