ಜಿಲ್ಲೆ

ಬೋಧನೆಗೆ ಆಧುನಿಕ ಸಾಧನಗಳು ಪೂರಕ

ಡಿ. ಎಂ. ಮಹೇಶ್

ದಾವಣಗೆರೆ: ಶಾಲೆಗಳಲ್ಲಿ ಮಕ್ಕಳಿಗೆ ಪಾಠಗಳನ್ನು ಬಾಯಲ್ಲಿ  ಹೇಳುವುದು ಪಾರಂಪರಿಕ ವಿಧಾನವಾಗಿದ್ದು ಇದಕ್ಕೆ ಪೂರಕವಾಗಿ ದೃಶ್ಯಗಳನ್ನೂ ತೋರಿಸಿದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ಇದಕ್ಕಾಗಿ ಆಧುನಿಕ ದೃಶ್ಯ ಸಾಧನಗಳ ಬಳಕೆ ಅವಶ್ಯ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.                   ಭಾರತ ವಿಕಾಸ ಪರಿಷತ್ತಿನ ದಾವಣಗೆರೆ ಗೌತಮ ಶಾಖೆಯ ವತಿಯಿಂದ ನಗರದ ಹಳ್ಳಿ ಮಹಾದೇವಪ್ಪ ಶಾಲೆಗೆ ಸ್ಮಾರ್ಟ್ ಟಿವಿ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ  ಮಾತನಾಡಿದರು.
ಭಾರತದ ಮನೆಗಳಲ್ಲಿ ಸುಮಾರು 19 ಕೋಟಿ 70 ಲಕ್ಷದಷ್ಟು ಟಿ ವಿ ಸೆಟ್ ಗಳಿದ್ದು ಬಹುತೇಕ ಮನರಂಜನೆಗಾಗಿಯೇ ಬಳಕೆಯಾಗುತ್ತಿವೆ. ಆದರೆ ಶಾಲೆಗಳಲ್ಲಿ ಸ್ಮಾರ್ಟ್ ಟಿ ವಿ  ಬಳಸಿ ಮಕ್ಕಳಿಗೆ ಪಠ್ಯಕ್ಕೆ ಪೂರಕವಾದ ದೃಶ್ಯಗಳನ್ನು ತೋರಿಸುತ್ತಾ ಪಾಠ ಮಾಡಿದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ಮತ್ತು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವುದರ ಜೊತೆಗೆ ರಂಜನೆಯೂ  ಇರುತ್ತದೆ ಎಂದರು.
ನಮ್ಮ ದೇಶದಲ್ಲಿ 1959ರ ವೇಳೆಗೆ ಮೊದಲ ಟಿ ವಿ ಪ್ರಸಾರ ಆರಂಭವಾಗಿದ್ದು 1961ರ ವೇಳೆಗೆ 'ಸ್ಕೂಲ್ ಎಜುಕೇಶನಲ್ ಟಿ ವಿ ಪ್ರಾಜೆಕ್ಟ್' ಅಂದರೆ ಶಾಲಾ ಶಿಕ್ಷಣದಲ್ಲಿ ಟಿ ವಿ ಬಳಕೆ ಯೋಜನೆ ಜಾರಿಗೆ ಬಂದಿತ್ತು, ಆದರೆ ಈಗಿನ ಸ್ಮಾರ್ಟ್ ಟಿ ವಿಗಳು ಇದಕ್ಕೆ ಅತ್ಯಂತ ಯೋಗ್ಯವಾಗಿವೆ, ಇದರ ಸದ್ಬಳಕೆ ಆಗಬೇಕು ಎಂದರು.
ಭಾರತ ವಿಕಾಸ ಪರಿಷತ್ ಗೌತಮ ಶಾಖೆಯ ಅಧ್ಯಕ್ಷ ಎ. ಎಸ್. ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಪರಿಷತ್ತಿನ ದಕ್ಷಿಣ ವಲಯ ಸಹಕಾರ್ಯದರ್ಶಿ ಅರುಣ್ ಜೆ ಘಾಟ್ಗೆ   ಮಾತನಾಡಿದರು.
ದಾನಿಗಳಾದ ಜಯಪ್ರಕಾಶ್ ಮಾಗಿ, ಪರಿಷತ್ತಿನ ಟಿ ಎಸ್ ಜಯ ರುದ್ರೇಶ್, ಹಿರಿಯಸಮಾಜಸೇವಕ ಕೆ ಬಿ ಶಂಕರನಾರಾಯಣ, ಪರಿಷತ್ತಿನ ಕೋಶಾಧ್ಯಕ್ಷೆ  ಎಂ. ಜಿ.ವೀಣಾ ಇದ್ದರು. ಡಾ.ಆರತಿ ಸುಂದರೇಶ್  ಕಾರ್ಯಕ್ರಮ ನಿರ್ವಹಿಸಿದರು.   ಭವಾನಿ ಶಂಭುಲಿಂಗಪ್ಪ ಶೀಲಾ ನಾಯಕ್   ಪ್ರಾರ್ಥನೆ ಹಾಡಿದರು.   ಪರಿಷತ್ತಿನ ಕಾರ್ಯದರ್ಶಿ ಎಂ. ಆರ್.ಮಧುಕರ್ ಸ್ವಾಗತಿಸಿದರು. ಬಸವರಾಜ್ ವಂದಿಸಿದರು.