ಜಿಲ್ಲೆ

ತರಕಾರಿ ಸೇವನೆಯಿಂದ ರೋಗ ನಿರೋಧಕ ಶಕ್ತಿ

ಡಿ. ಎಂ. ಮಹೇಶ್

ದಾವಣಗೆರೆ: ಉತ್ತಮ ಪೋಷಕಾಂಶದ ತರಕಾರಿಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೆಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಹೇಳಿದರು.
ಜಗಳೂರು ತಾಲೂಕಿನ ಬಸಪ್ಪನಹಟ್ಟಿ ಗ್ರಾಮದಲ್ಲಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಹಮ್ಮಿಕೊಂಡ ಪೌಷ್ಟಿಕ ಕೈತೋಟ ತರಬೇತಿಯಲ್ಲಿ ಮಾತನಾಡಿದರು.
ನುಗ್ಗೆಕಾಯಿಯನ್ನು ಮನೆಯ ಕೈತೋಟದಲ್ಲಿ ಬೆಳೆಯುವುದರಿಂದ ವರ್ಷಪೂರ್ತಿ ಸೊಪ್ಪು ದೊರೆಯಲಿದೆ. ನುಗ್ಗೆ ಸೊಪ್ಪಿನಲ್ಲಿನ ಕಬ್ಬಿಣದ ಅಂಶ ಮತ್ತು ಹಿಮೋಗ್ಲೋಬಿನ್ ಹೆಚ್ಚು ಮಾಡುವ ಗುಣದಿಂದ ನಮ್ಮ ಆರೋಗ್ಯದಲ್ಲಿ ರೋಗ ನಿರೋಧಕತೆ ಹೆಚ್ಚಲಿದೆ. ಮಾನಸಿಕ ಸದೃಢವಾಗಿರಲು ಸಹಾಯವಾಗಲಿದೆ ಎಂದು ತಿಳಿಸಿದರು. ವೈಜ್ಞಾನಿಕವಾಗಿ ನುಗ್ಗೆ ಬೆಳೆಯ ಬೇಸಾಯ ಕ್ರಮಗಳ ಬಗ್ಗೆ ತರಬೇತಿ ನೀಡಿದರು.  
ವಿಜ್ಞಾನಿ ಡಾ. ಸುಪ್ರಿಯಾ ಪಿ ಪಾಟೀಲ್ ಮಾತನಾಡಿ ಆಹಾರದಿಂದ ಆರೋಗ್ಯ, ಆರೋಗ್ಯವೇ ಆದಾಯವೆಂಬುದನ್ನು ತಾವೆಲ್ಲರೂ ತಿಳಿಯಬೇಕು. ಇತ್ತೀಚಿಗೆ ಮಹಿಳೆಯರಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗುತ್ತಿದ್ದು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ನುಗ್ಗೆಕಾಯಿ ಮತ್ತು ಸೊಪ್ಪು ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭ, ಮೌಲ್ಯವರ್ಧನೆಯ ಬಗ್ಗೆ ತಿಳಿಸಿದರು.
ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಟಿ.ಜಿ.ಅವಿನಾಶ್ ಮಾತನಾಡಿ ಆಹಾರದಿಂದ ಕುಟುಂಬದ ಆರೋಗ್ಯ ಕಾಪಾಡುವಷ್ಟೇ ಮುಖ್ಯವಾಗಿ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ಅಗತ್ಯವಿದೆ. ಎಲ್ಲರೂ ಕೈಜೋಡಿಸಿದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ 30 ರೈತ ಮಹಿಳೆಯರಿಗೆ ನುಗ್ಗೆ ಸಸಿಯನ್ನು ಪೌಷ್ಟಿಕ ಕೈತೋಟ ಯೋಜನೆಯಲ್ಲಿ ವಿತರಿಸಲಾಯಿತು. ಈಗಾಗಲೇ ಅಭಿವೃದ್ಧಿ ಪಡಿಸಿರುವ ತಾಕುಗಳಿಗೆ ಭೇಟಿ ನೀಡಲಾಯಿತು. ಬಸಪ್ಪನಹಟ್ಟಿ ಗ್ರಾಮದ ಪ್ರಗತಿಪರ ರೈತರಾದ ಕೃಷ್ಣಮೂರ್ತಿ, ಶಶಿಕುಮಾರ ಹಾಗೂ ರೈತ ಮಹಿಳೆಯರು ಹಾಜರಿದ್ದರು.