ಜಿಲ್ಲೆ

ಮುಡಾ ಹಗರಣ ಬಿಜೆಪಿ ಸೃಷ್ಟಿ  ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಟೀಕೆ

ಡಿ. ಎಂ. ಮಹೇಶ್

ದಾವಣಗೆರೆ: ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ, ಬಿಜೆಪಿ ಸೃಷ್ಟಿಯಾಗಿದೆ. ಅವರ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶುದ್ಧ ರಾಜಕಾರಣಿ. ಅವರನ್ನು ಆಡಳಿತಾತ್ಮಕವಾಗಿ ವಿರೋಧಿಸಲು ವಿಷಯ ಸಿಗದ ಬಿಜೆಪಿಗರು ಹಾಗೂ ಎಚ್.ಡಿ.ಕುಮಾರಸ್ವಾಮಿ ಈ ಹಗರಣ ಹುಟ್ಟು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಓಲೈಕೆ ತಂತ್ರವಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸಿದ್ದರಾಮಯ್ಯ ಅವರ ಪತ್ನಿಗೆ ತವರು ಮನೆಯಿಂದ ಉಡುಗೊರೆಯಾಗಿ ಬಂದ 3.16 ಎಕರೆ ಜಮೀನನ್ನು ಮುಡಾ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿತ್ತು. ಇದರ ಬದಲಾಗಿ ಬಿಜೆಪಿ ಅಧಿಕಾರವಧಿಯಲ್ಲಿ (2021ರಲ್ಲಿ) ಮುಡಾ 50:50 ಅನುಪಾತದಡಿ ಬೇರೆಡೆ  ಜಮೀನು ನೀಡಿತ್ತು. ಆದರೆ, ಈಗ ವಿಪಕ್ಷದವರು ಅಕ್ರಮ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.
ಮುಡಾ ಹಗರಣ ಹೊರಬರುವಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಕುಮಾರಸ್ವಾಮಿ ಮಾಡಿದ ಆಓಪ ಕೇವಲ ಹಿಟ್ ಆ್ಯಂಡ್ ರನ್ ಆರೋಪ ಮಾತ್ರ. ಇದಕ್ಕೆ ಆಧಾರಗಳಿಲ್ಲ. ಬಿಜೆಪಿಗರು ಸರ್ಕಾರದ ವಿರುದ್ಧ ಅನಗತ್ಯ ಆರೋಪ ಮತ್ತು ಹೋರಾಟ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಜನರೇ ಅವರಿಗೆ ಕಪಾಳಮೋಕ್ಷ ಮಾಡಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಎಂ. ಮಂಜುನಾಥ್, ಎಂ.ಕೆ. ಲಿಯಾಕತ್ ಅಲಿ, ಬಿ.ಎಚ್.ಉದಯಕುಮಾರ್, ಡಿ. ಶಿವಕುಮಾರ್, ಸುರೇಶ್, ಮುಬಾರಕ್ ಇತರರಿದ್ದರು.
---