ಜಿಲ್ಲೆ

ನಾಳೆಯಿಂದ ದಾಮ್‌ಕೋಸ್ ರಜತ ಮಹೋತ್ಸವ

ಡಿ. ಎಂ. ಮಹೇಶ್

ದಾವಣಗೆರೆ: ದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ (ದಾಮ್‌ಕೋಸ್) 25 ವರ್ಷಗಳನ್ನು ಪೂರೈಸಿದ್ದರ ಹಿನ್ನೆಲೆಯಲ್ಲಿ ನಗರದ ಡಾ. ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಸೆ. 18ರಿಂದ 20 ರವರೆಗೆ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆ ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ 2000ರ ಜ. 10ರಂದು ಸಂಘ ಚಾಲನೆಗೊಂಡಿತ್ತು. ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಂದಿನ ಶಾಸಕ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ, ಆಗಿನ ಯುವಜನ ಮತ್ತು ಕ್ರೀಡಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಉದ್ಘಾಟಿಸಿದ್ದ ಸಂಘವು ರಜತ ವರ್ಷಗಳನ್ನು ಪೂರೈಸಿದೆ ಎಂದು ಸಂಘದ ಅಧ್ಯಕ್ಷ ಬಿ.ಕೆ. ಶಿವಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರಂಭದಲ್ಲಿ ಸಂಘ ನಡೆಸುವುದು ಕಷ್ಟವಿತ್ತು. ಹಾಲಿ 1353 ಸದಸ್ಯರಿದ್ದಾರೆ. ದಾವಣಗೆರೆ ತಾಲೂಕಿನಲ್ಲಿರುವ ಎಲ್ಲ 15 ಸಾವಿರ ಅಡಕೆ ಬೆಳೆಗಾರರನ್ನೂ ನೋಂದಣಿ ಮಾಡಿಸುವುದು ಹಾಗೂ ಈಗಿರುವ 45 ಲಕ್ಷ ರೂ.ಗಳ ಷೇರು ಬಂಡವಾಳ ಮೊತ್ತವನ್ನು 10 ಕೋಟಿ ರೂ.ಗೆ ಏರಿಸುವ ಗುರಿಯೊಂದಿಗೆ ಭವಿಷ್ಯದಲ್ಲಿ ತುಮ್‌ಕೋಸ್ ಮಟ್ಟಕ್ಕೆ ಬೆಳೆಸುವ ಇರಾದೆ ಇದೆ ಎಂದು ತಿಳಿಸಿದರು.
ವಾರ್ಷಿಕ 30 ಕೋಟಿ ರೂ. ಅಡಕೆ ವಹಿವಾಟಿರುವ ದಾಮ್‌ಕೋಸ್‌ನಲ್ಲಿ 9 ಸಾವಿರ ಕ್ವಿಂ. ವರೆಗೆ ಅಡಕೆ ಖರೀದಿ ಆಗುತ್ತಿದೆ. ಎಲ್ಲ ಸದಸ್ಯರು ನಿಯಮಿತವಾಗಿ ಸಂಸ್ಥೆಗೆ ಅಡಕೆ ಮಾರುತ್ತಿಲ್ಲ. ಹೀಗಾಗಿ ಸಂಸ್ಥೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಮುಂದಿನ ದಿನದಲ್ಲಿ ಸಂಘದ ಬೆಳವಣಿಗೆಗೆ ಸದಸ್ಯರು ಸಹಕರಿಸಬೇಕೆಂದು ಮನವಿ ಮಾಡಿದರು.
 ಷೇರು ಮೊತ್ತವನ್ನು 5 ಸಾವಿರ ರೂ.ಗೆ ವಿಸ್ತರಣೆ ಮಾಡಲಾಗಿದೆ. ಷೇರುದಾರರಿಗೆ ವಾರ್ಷಿಕ ಕನಿಷ್ಠ 12ರಿಂದ 16ರಷ್ಟು ಡೆವಿಡೆಂಡ್ ನೀಡಲಾಗುತ್ತಿದೆ. ಶೇ.12ರ ಬಡ್ಡಿದರದಲ್ಲಿ ಶೇ.60ರಷ್ಟು ಸಾಲ ಸೌಲಭ್ಯ ನೀಡಲಾಗುತ್ತಿದೆ. ಸಂಘವು ಸದ್ಯಕ್ಕೆ 30 ಲಕ್ಷ ರೂ. ಲಾಭದಲ್ಲಿದೆ.
ದಾಮ್‌ಕೋಸ್ ಸಂಘವು ಸ್ವಂತ ಕಟ್ಟಡ ಹೊಂದಿದೆ. 2006ರಲ್ಲಿ ಕ್ಯಾಂಪ್ಕೊ ಸಹಭಾಗಿತ್ವದಲ್ಲಿ ರೈತರಿಂದ ನೇರ ಅಡಕೆ ಖರೀದಿಗೆ ಕೇಂದ್ರ ಆರಂಭಿಸಲಾಗಿದೆ. ಈಗಿರುವ ತಾಲೂಕು ಕಚೇರಿ ಬಳಿ 6200 ಚದರಡಿ ವಿಸ್ತೀರ್ಣದ ಜಾಗದಲ್ಲಿ ಅಡಕೆ ಬೆಳೆಗಾರರಿಗೆ ಸಕಲ ಮಾಹಿತಿ ನೀಡುವ ಕೇಂದ್ರ ಆರಂಭಿಸುವ ಚಿಂತನೆ ಇದೆ ಎಂದು ಹೇಳಿದರು.
ರಜತ ಮಹೋತ್ಸವದ ಅಂಗವಾಗಿ ಕೃಷಿ ಯಂತ್ರ ಮೇಳ ಆಯೋಜಿಸಲಾಗಿದ್ದು, ಸೆ. 18ರಂದು ಬೆಳಗ್ಗೆ 10-30ಕ್ಕೆ ದಾಮ್‌ಕೋಸ್ ನಿರ್ದೇಶಕ ಎಚ್.ಜಿ. ಮರುಳಸಿದ್ದಪ್ಪ ಉದ್ಘಾಟಿಸುವರು. ಅಡಕೆ ಕೃಷಿಯಲ್ಲಿ ಬಳಸುವ, ಸುಲಿಯುವ, ಸ್ವಚ್ಛಗೊಳಿಸುವ, ಒಣಗಿಸುವ ಯಂತ್ರಗಳು ಪ್ರದರ್ಶಿತವಾಗುವ ಜತೆಗೆ ಮಾರಾಟಕ್ಕೆ ಲಭ್ಯ ಇರಲಿವೆ.
ಸೆ. 19ರಂದು ಬೆಳಗ್ಗೆ 11 ಗಂಟೆಗೆ ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಜತಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಂಸದ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಕೆ.ಎಸ್.ಬಸವಂಥಪ್ಪ, ಆರಗ ಜ್ಞಾನೇಂದ್ರ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಇತರರು ಪಾಲ್ಗೊಳ್ಳುವರು.
ಸೆ. 20ರಂದು ಬೆಳಗ್ಗೆ 11 ಗಂಟೆಗೆ ಅಡಕೆ ಕೃಷಿ ಮತ್ತು ಅಡಕೆ ಉದ್ಯಮದ ಹೊಸ ಸಾಧ್ಯತೆಗಳು ಕುರಿತು ವಿಚಾರ ಸಂಕಿರಣ ನಡೆಯಲಿದ್ದು ಪ್ರಗತಿಪರ ಅಡಕೆ ಬೆಳೆಗಾರರು, ಸಂಸ್ಕರಣೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿರುವ ಪರಿಣತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಚ್.ಜಿ.ಮಲ್ಲಿಕಾರ್ಜುನ್, ನಿರ್ದೇಶಕರಾದ ಎಚ್. ಜಿ.ಮರುಳಸಿದ್ದಪ್ಪ, ಬಿ. ಬಸವರಾಜಯ್ಯ, ಕೆ.ಜಿ. ಉಮೇಶ್, ಎಂ.ಆರ್. ಮಂಜುನಾಥಯ್ಯ, ಜಿ.ಸಿ. ವಾಮದೇವಪ್ಪ, ರೈತರಾದ ರಾಂಪುರ ನರೇಂದ್ರ, ಶಿವಕುಮಾರ್, ಲಿಂಗರಾಜ್ ಇದ್ದರು.
---