ಜಿಲ್ಲೆ

ಬಾಲ್ಯದಲ್ಲೇ ಕಲ್ಪಿಸಿ ಸಾಮಾಜಿಕ ನೈರ್ಮಲ್ಯ ಜಾಗೃತಿ   ಡಾ. ನಾ. ಸೋಮೇಶ್ವರ ಆಶಯ  ಈಶ್ವರೀಯ ವಿವಿಯ ಸೇವಾ ಯೋಜನೆ ಪ್ರಾರಂಭ

ದಾವಣಗೆರೆ : ಮಕ್ಕಳಿಗೆ ಬಾಲ್ಯದಲ್ಲೇ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ನೈರ್ಮಲ್ಯ ಕುರಿತು ಪಾಲಕರು ಜಾಗೃತಿ ಮೂಡಿಸಬೇಕು ಎಂದು ಲೇಖಕ ಡಾ. ನಾ. ಸೋಮೇಶ್ವರ ಆಶಿಸಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಮತ್ತು ಸಿಹಿ ಪ್ರಕಾಶನದ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸ್ವಚ್ಛ ಮತ್ತು ಸ್ವಸ್ಥ ಸಮಾಜಕ್ಕಾಗಿ ಆಧ್ಯಾತ್ಮಿಕ ಸಬಲೀಕರಣ’ ಸೇವಾ ಯೋಜನೆಯ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ನೈರ್ಮಲ್ಯದ ಬಗ್ಗೆ ಭಾರತೀಯರಿಗೆ ಗಮನ ಇಲ್ಲದಿರುವುದು ದುರಂತದ ಸಂಗತಿ. ಪಾಲಕರು ಖುದ್ದು ಸ್ವಚ್ಛತಾ ಕಾರ್ಯ ನಡೆಸಿ ಪ್ರದರ್ಶಿಸಬೇಕೇ ಹೊರತಾಗಿ ಮಕ್ಕಳೆದುರು ಭಾಷಣ ಬಿಗಿಯಬಾರದು. ಸ್ವಚ್ಛ ಮತ್ತು ಸ್ವಸ್ಥ ಸಮಾಜದ ಮಹತ್ವವನ್ನು ತಿಳಿಸಿ, ಮರು ಜಾಗೃತಿಗೊಳಿಸಬೇಕಾದ ಅಗತ್ಯತೆ ಇದೆ ಎಂದರು.
ನಾವು ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂಪಾದಿಸಲು ನಮ್ಮ ದೇಹದ ಪಂಚೇಂದ್ರಿಯಗಳು, ಮನಸ್ಸು ಮತ್ತು ಆತ್ಮ ಎಲ್ಲವೂ ಪ್ರಸನ್ನವಾಗಿರಬೇಕು. ಇಂದ್ರನ ವಜ್ರಾಯುಧದಷ್ಟೇ ಶಕ್ತಿಶಾಲಿಯಾದ ಇಂದ್ರಿಯಗಳನ್ನು ಗೆಲ್ಲುವುದು ಸರಳವಲ್ಲ. ಬುದ್ಧಿಯ ಮಾತನ್ನು ಮನಸ್ಸು ಕೇಳಿದಾಗ ಇವುಗಳನ್ನು ನಿಯಂತ್ರಿಸಬಹುದು ಎಂದು ಹೇಳಿದರು. ಇದೇ ವೇಳೆ ಅವರು  ಲೇಖಕ ಶಿವಪ್ರಸಾದ ಕರ್ಜಗಿ ಅವರ ‘ಪ್ರಸಾದವಾಣಿ’ ಕೃತಿ ಬಿಡುಗಡೆಗೊಳಿಸಿದರು.
ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಮನುಷ್ಯನಲಿನ ದುರ್ಬುದ್ಧಿಯ ವರ್ತನೆಯಿಂದ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆಯಂತಹ ಘಟನೆಗಳು ನಡೆಯುತ್ತಿವೆ. ಬುದ್ಧಿ ಶುದ್ಧಿಯಾದರೆ ಸಿದ್ಧಿ ಸಿಗಲಿದೆ ಎಂದು ಹೇಳಿದರು.
 ನಾವು ಆಧ್ಯಾತ್ಮವನ್ನು ಪ್ರವೇಶಿಸಿದರೆ ಸಾತ್ವಿಕತೆ ಬರಲಿದೆ. ಇದರಿಂದ ಕೆಟ್ಟ ಗುಣಗಳು ಕಡಿಮೆಯಾಗಿ, ಒಳ್ಳೆ ಗುಣಗಳು ವೃದ್ಧಿಯಾಗಲಿವೆೆ. ಸಾತ್ವಿಕತೆಯ ಕಾರಣಕ್ಕಾಗಿಯೇ ಬುದ್ಧ, ಬಸವ, ಅಕ್ಕಮಹಾದೇವಿ ಖ್ಯಾತನಾಮರಾಗಿದ್ದಾರೆ ಎಂದರು.
ಯುವ ಲೇಖಕರನ್ನು ಬೆಳೆಸಬೇಕಾದರೆ ಕೃತಿಗಳನ್ನು ಖರೀದಿಸಿ ಓದಬೇಕು. ನಾವು 100 ಕೃತಿ ಖರೀದಿಸಿ, ಮಠಕ್ಕೆ ಬರುವ ಭಕ್ತರಿಗೆ ನೆನಪಿನ ಕಾಣಿಕೆ ನೀಡುತ್ತೇವೆ. ನೀವು ಸಹ ಪುಸ್ತಕ ಖರೀದಿಸಿ ಶುಭ ಸಮಾರಂಭಗಳಿಗೆ ಹೋದಾಗ ಉಡುಗೊರೆಯಾಗಿ ನೀಡಬೇಕು ಎಂದು ಸಭಿಕರಿಗೆ ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಸಂಚಾಲಕಿ ರಾಜಯೋಗಿನಿ ಲೀಲಾಜಿ ಮಾತನಾಡಿ, ನಮ್ಮ ಸಂಸ್ಥೆಯು ಯಾವುದೇ ಮತ, ಜಾತಿ, ಲಿಂಗ ಭೇದವಿಲ್ಲದೇ ಆಧ್ಯಾತ್ಮಿಕ ಶಿಕ್ಷಣ ನೀಡುತ್ತಿದೆ. ದೇಶದಲ್ಲಿ 10 ಸಾವಿರ, ವಿದೇಶಗಳಲ್ಲಿ 500 ಸೇವಾ ಕೇಂದ್ರಗಳ ಮೂಲಕ ನೈತಿಕ ಶಿಕ್ಷಣ ಕಲ್ಪಿಸುತ್ತಿದೆ ಎಂದರು.
ಆಧ್ಯಾತ್ಮ ಮತ್ತು ಧರ್ಮ ಎರಡೂ ಬೇರೆ ಬೇರೆ. ಆದರೂ ಕೆಲವರು ಅವನ್ನು ಬೆರೆಸಿ ಕಚ್ಚಾಡುತ್ತಿದ್ದಾರೆ. ಶಾಂತಿಯೇ ನಿಜವಾದ ಧರ್ಮವಾಗಿದೆ ಎಂದು ಹೇಳಿದರು.
ಚನ್ನಗಿರಿಯ ಡಾ.ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚರಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ಸ್ವಾಮಿ ನಾರಾಯಣಾನಂದ ಸರಸ್ವತಿ ಸಾನ್ನಿಧ್ಯ ವಹಿಸಿದ್ದರು. ರಾಜಯೋಗಿನಿ ಅನಸೂಯಾಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಕೆ.ಮಂಜುನಾಥ್, ಬೆಂಗಳೂರು ಕಸಾಪ ಸದಸ್ಯ ನೇ.ಭ. ರಾಮಲಿಂಗ ಶೆಟ್ಟಿ, ಸಾಹಿತಿ ಶಿವಯೋಗಿ ಹಿರೇಮಠ, ರಾಜೇಂದ್ರಪ್ರಸಾದ್ ನೀಲಗುಂದ, ಕೆ.ವಿ. ಧರಣೇಶ್ ಇದ್ದರು.
----