ಜಿಲ್ಲೆ

ಅಸಮತೆ ನೀಗಲು ಬೇಕು ಸಮುದಾಯದ ನೆರವು

ಡಿ. ಎಂ. ಮಹೇಶ್

ದಾವಣಗೆರೆ: ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಿದಂತೆಲ್ಲ ಸಾಮಾಜಿಕ ಅಸಮತೋಲನ ಹೆಚ್ಚಲಿವೆ. ಇದರ ನಿರ್ವಹಣೆಗೆ ಸರ್ಕಾರದ ಯೋಜನೆಗಳ ಜತೆಯಲ್ಲೇ ಸಾರ್ವಜನಿಕರಿಂದಲೂ ನೆರವಿನ ಅಗತ್ಯವಿದೆ ಎಂದು ಎಎಸ್ಪಿ ಪರಮೇಶ್ವರ ಹೆಗಡೆ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ನಗರದ ಸದ್ಯೋಜಾತ ಶಿವಾಚಾರ್ಯ ನಿಕೇತನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಗಣತಿಯಂತೆ ದೇಶದಲ್ಲಿ 2011ರಲ್ಲಿ ಹಿರಿಯ ನಾಗರಿಕರ ಸಂಖ್ಯೆ 10.40 ಕೋಟಿ ಇತ್ತು. ಈಗ ಇದರ ಪ್ರಮಾಣ 30 ಕೋಟಿ ದಾಟಿರಬಹುದು. ಇದರ ಪರಿಣಾಮ ವೃದ್ಧರಲ್ಲಿ ಒಂಟಿತನ, ಸಕಾಲಿಕ ಚಿಕಿತ್ಸೆ ಸಿಗದಿರುವ ಸಮಸ್ಯೆ ಕಾಡಲಿವೆ. ಇದಕ್ಕಾಗಿ ಸರ್ಕಾರ ನಾನಾ ಯೋಜನೆ ನೀಡುತ್ತಿದೆ. ಜನರಿಂದಲೂ ಸಹಾಯಹಸ್ತ ಬೇಕಿದೆ ಎಂದರು.

ಅಜ್ಜ- ಅಜ್ಜಿಯರು ಮೊಮ್ಮಕ್ಕಳಿಗೆ ರಾಮಾಯಣ, ಮಹಾಭಾರತ ಕತೆ ಹೇಳುತ್ತಿದ್ದರು. ಯಕ್ಷಗಾನ, ತಾಳಮದ್ದಳೆ ಕೇಳುತ್ತ ಎಲ್ಲರೊಡನೆ ಬೆರೆತು ಯೌವನ ದಾಟಿ ಬಂದಿದ್ದೇವೆ. ಮೊದಲ ಪಾಠಶಾಲೆಯಾದ ಮನೆಯಿಂದಲೇ ಸಂಸ್ಕಾರ, ಹಿರಿಯರ ಅನುಭವ, ಜ್ಞಾನ ಭಂಡಾರದ ಹಂಚಿಕೆಯಾದಲ್ಲಿ ಸಮಾಜ ಬದಲಾವಣೆ ಆಗಲಿದೆ ಎಂದು ಹೇಳಿದರು.

ಇಂದಿನ ಹಳ್ಳಿಗಳು ವೃದ್ಧಾಶ್ರಮದಂತಾಗಿವೆ. ಕೆಲಸದ ಕಾರಣಕ್ಕೆ ವಲಸೆ ಹೋಗಿರುವುದು, ಮಾರ್ಗದರ್ಶನದ ಕೊರತೆ ಇತ್ಯಾದಿ ಕಾರಣಕ್ಕೆ ಅಜ್ಜ-ಅಜ್ಜಿಯರ ಪ್ರೀತಿ ವಾತ್ಸಲ್ಯ ಸಿಗದಿರುವ ಸ್ಥಿತಿ ಇದೆ. ವೃದ್ಧಾಶ್ರಮಗಳ ಹೆಚ್ಚಳವು ನಾವು ಸಾಮಾಜಿಕವಾಗಿ ಎಡವುತ್ತಿರುವ ಸಂಕೇತವಾಗಿದೆ ಎಂದು ಖೇಧ ವ್ಯಕ್ತಪಡಿಸಿದರು.

ಬಟ್ಟೆ ವ್ಯಾಪಾರದಲ್ಲಿ ಸಾಮ್ರಾಜ್ಯ ಕಟ್ಟಿದ್ದ ರೇಮಂಡ್ಸ್ ಕಂಪನಿ ಮಾಲೀಕ ವಿಜಯಪತ್ ಸಿಂಗಾನಿಯಾ 2000ರ ಹೊತ್ತಿಗೆ ಪುತ್ರ ಗೌತಮ್ ಸಿಂಗಾನಿಯಾನಿಗೆ ವ್ಯವಹಾರ ಹಸ್ತಾಂತರಿಸಿ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು ಎಂದು ಉದಾಹರಿಸಿದ ಅವರು, ಮಕ್ಕಳ ಮೇಲೆ ಎಷ್ಟೇ ಪ್ರೀತಿ ಇದ್ದರೂ ಹಿರಿಯ ನಾಗರಿಕರು ವೈಯಕ್ತಿಕ ಭದ್ರತೆಗೂ ಮಹತ್ವ ನೀಡಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಹಿರಿಯ ನಾಗರಿಕರು ವಿವಿಧ ಹಬ್ಬಗಳ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಕಚೇರಿಯಲ್ಲಿ ಆಯೋಜಿಸುವ ಸೌಹಾರ್ದ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ಸಲಹೆ ಸೂಚನೆ ನೀಡಬೇಕು. ಡಿಜೆ ಬಳಕೆ, ಆರೋಗ್ಯ ಸಮಸ್ಯೆ, ಯುವಕರಲ್ಲಿ ಹೆಚ್ಚಿದ ಮಾದಕ ವ್ಯಸನ ಇತ್ಯಾದಿ ಬಗ್ಗೆ ಅನಿಸಿಕೆ ಹಂಚಿಕೊಳ್ಳಬೇಕು. ತನ್ಮೂಲಕ ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

ವಕೀಲ ಬಳ್ಳಾರಿ ರೇವಣ್ಣ ಮಾತನಾಡಿ ಜಪಾನ್‌ನಲ್ಲಿ ನೂರು ವರ್ಷ ತುಂಬಿದವರೇ 1 ಲಕ್ಷ ಜನಸಂಖ್ಯೆ ಇದ್ದು ಅವರ ಪಾಲನೆ ವೆಚ್ಚವನ್ನು ಅಲ್ಲಿನ ಸರ್ಕಾರವೇ ಭರಿಸುತ್ತಿದೆ. ಭಾರತದಲ್ಲೂ ಇಂತಹ ಚಿಂತನೆ ನಡೆದಿದೆ ಎಂದರಲ್ಲದೆ, ವೈಜ್ಞಾನಿಕ ಅಧ್ಯಯನದ ಪ್ರಕಾರ ವಯೋವೃದ್ಧರು ಕಾಯಿಲೆಗಳಿಗೆ ಮಾತ್ರೆಗಳನ್ನೇ ಅವಲಂಭಿಸುತ್ತಿರುವ ಕಾರಣಕ್ಕೆ ಅವರಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತಿದೆ ಎಂದು ತಿಳಿಸಿದರು.

ವಯೋವೃದ್ಧರ ಬೇಡಿಕೆಗಳ ಬಗ್ಗೆ ಹಿರಿಯ ನಾಗರಿಕರ ಸಂಘದ ಜಿಲ್ಲಾಧ್ಯಕ್ಷ ಎಸ್. ಗುರುಮೂರ್ತಿ ಪ್ರಸ್ತಾಪಿಸಿದರು. ರಸ್ತೆ ಸಾರಿಗೆ ಬಸ್‌ಗಳಲ್ಲಿ ರಿಯಾಯಿತಿಯನ್ನು ಶೇ.50ಕ್ಕೆ ಏರಿಸಬೇಕು. ಐರಾವತ/ವಿದ್ಯುತ್‌ಚಾಲಿತ ಹವಾನಿಯಂತ್ರಿತ ಬಸ್‌ಗಳಿಗೂ ವಿಸ್ತರಿಸಬೇಕು. ಸಾರ್ವಜನಿಕ ಕಚೇರಿಗಳಲ್ಲಿ ಪ್ರತ್ಯೇಕ ಕೌಂಟರ್ ಇಲ್ಲವೇ ಆದ್ಯತಾ ಚೀಟಿಯ ವ್ಯವಸ್ಥೆ ಮಾಡಬೇಕು. ರೈಲು ಸಂಚಾರದಲ್ಲಿ ಶೇ.50ರಷ್ಟು ರಿಯಾಯಿತಿ ಕಲ್ಪಿಸಬೇಕು. ಹಿರಿಯ ನಾಗರಿಕರ ಉದ್ಯಾನದಲ್ಲಿ ಸಂಗೀತ ವ್ಯವಸ್ಥೆ ಮಾಡಬೇಕು. ಸಂಘಕ್ಕೆ ನಿವೇಶನ ಕಲ್ಪಿಸಬೇಕೆಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ವೀರಯ್ಯ, ಮರಿಯಾಚಾರ್, ಜಿಲ್ಲಾ ವಿಕಲಚೇತನರ ಇಲಾಖೆ ಅಧಿಕಾರಿ ಡಾ. ಕೆ.ಕೆ. ಪ್ರಕಾಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯೋಗೇಂದ್ರಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ ಪಟಗೆ ಇತರರಿದ್ದರು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೃದ್ಧರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.