ಜಿಲ್ಲೆ

ವೃದ್ಧರ ಬಸ್ ಪ್ರಯಾಣದ ರಿಯಾಯಿತಿ ಏರಿಕೆಗೆ ಯತ್ನ  ಶಾಸಕ ಬಸವಂತಪ್ಪ

ಡಿ. ಎಂ. ಮಹೇಶ್

ದಾವಣಗೆರೆ: ಹಿರಿಯ ನಾಗರಿಕರ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ರಿಯಾಯಿತಿ ದರದ ಪ್ರಮಾಣವನ್ನು ಶೇ. 25ರಿಂದ ಶೇ.40ಕ್ಕೆ ಏರಿಕೆ ಮಾಡುವ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಬಳಿ ಚರ್ಚಿಸಿ, ಈಡೇರಿಕೆಗೆ ಪ್ರಯತ್ನಿಸುವುದಾಗಿ ಶಾಸಕ ಕೆ.ಎಸ್. ಬಸವಂತಪ್ಪ ಭರವಸೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ನಗರದ ಸದ್ಯೋಜಾತ ಶಿವಾಚಾರ್ಯ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಜೀವಿಗಳ ನಿವೇಶನ ಬೇಡಿಕೆ ಕುರಿತಂತೆ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ನಿವೇಶನ ಒದಗಿಸುವಂತೆ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರ ಬಳಿಯೂ ಮಾತನಾಡಲಿದ್ದೇನೆ ಎಂದು ತಿಳಿಸಿದರು.
ಸರ್ಕಾರ, ಹಿರಿಯ ನಾಗರಿಕರ ಕಾಳಜಿ ದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸರಿಯಾಗಿ ಬಳಸಿಕೊಂಡು ಸದುಪಯೋಗ ಪಡೆಯಬೇಕು ಎಂದರು.
ರೈತಾಪಿ ವರ್ಗದ ಜನರಲ್ಲಿ ವೃದ್ಧರನ್ನು ಗೌರವಿಸುವ ಸಂಸ್ಕಾರ ಇಂದಿಗೂ ಜೀವಂವಿದೆ. ಆದರೆ ವಿದ್ಯಾವಂತರು ವಯೋವೃದ್ಧರನ್ನು, ಪಾಲಕರನ್ನು ಅಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಇದು ಬೇಸರದ ಸಂಗತಿ ಎಂದು ಹೇಳಿದರು.
ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ತಮ್ಮ ಜೀವನವನ್ನೇ ತ್ಯಾಗ ಮಾಡುತ್ತಾರೆ. ಉತ್ತಮ ಹಂತಕ್ಕೆ ತಲುಪಿದ ಅದೇ ಮಕ್ಕಳು ಹೆತ್ತವರನ್ನು ಸಾಕಲಾಗದೆ ವೃದ್ಧಾಶ್ರಮಗಳಿಗೆ ಬಿಡುತ್ತಿದ್ದಾರೆ. ಇದು ಸಂಸ್ಕಾರವಲ್ಲ ಎಂದು ತಿಳಿಸಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಯುವ ಪೀಳಿಗೆಯು ವೃದ್ಧಾಪ್ಯದ ಜನರಿಗೆ ಸಹಾಯ ಮಾಡುವ ಹಾಗೂ ಗೌರವಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಮೇಯರ್ ಕೆ. ಚಮನ್ ಸಾಬ್ ಮಾತನಾಡಿ, ಪಾಲಿಕೆಗೆ ಸಂಬಂಧಿಸಿದ ಕಾರ್ಯನಿಮಿತ್ತ ನಗರಪಾಲಿಕೆಗೆ ಬರುವ ಹಿರಿಯ ನಾಗರಿಕರಿಗೆ ಸ್ಪಂದಿಸಿ ತ್ವರಿತ ಕೆಲಸವಾಗಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಆಯುಷ್ ಇಲಾಖೆಯ ಡಾ. ಸುಧಾ ಅವರ ತಂಡದಿಂದ 110 ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಔಷಧ ವಿತರಿಸಲಾಯಿತು. ಕ್ರೀಡೆ- ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹಿರಿಯ ನಾಗರಿಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಟಿ. ಕುಸುಮ ಶ್ರೇಷ್ಠಿ, ಕಾರ್ಯದರ್ಶಿ ಎಸ್. ಗುರುಮೂರ್ತಿ, ಕೆ.ಜಿ. ಭರತ್‌ರಾಜ್, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಪನಿರ್ದೇಶಕ ಡಾ.ಕೆ.ಕೆ. ಪ್ರಕಾಶ್, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಎಸ್. ರಾಜಾನಾಯ್ಕ,  ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಯು. ಯೋಗೇಂದ್ರ ಕುಮಾರ್ ಇತರರಿದ್ದರು.