ದಾವಣಗೆರೆ: ಜನ್ಮಶತಾಬ್ಧಿ ವರ್ಷಾಚರಣೆಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಆರೆಸ್ಸೆಸ್‌ನ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಚಾರಕ ಗುರುಪ್ರಸಾದ್ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಘಟಕದಿಂದ ಇಲ್ಲಿನ ದೇವರಾಜು ಅರಸು ಬಡಾವಣೆಯ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಖಾ ಏಕತ್ರೀಕರಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಬರುವ ವಿಜಯದಶಮಿಗೆ 101ನೇ ವರ್ಷಕ್ಕೆ ಸಂಘ ಕಾಲಿಡುತ್ತಿದೆ. ಅಂದು ವಾರ್ಡ್ ಸಹಿತ ವಿಜಯದಶಮಿ ಆಚರಿಸಲಾಗುತ್ತಿದ್ದು ಎಲ್ಲ ಸ್ವಯಂಸೇವಕರು ಗಣವೇಷಧಾರಿಗಳಾಗಿ ಭಾಗವಹಿಸಬೇಕು. ದಾವಣಗೆರೆಯ 41 ವಾರ್ಡ್‌ಗಳಲ್ಲೂ ಹಿಂದುತ್ವ ಜಾಗರಣ ತಂಡ ತಯಾರಾಗಬೇಕು. ಸ್ಥಾನೀಯ ಸಮಸ್ಯೆಗಳ ಬಗ್ಗೆ ಆ ತಂಡಗಳೇ ಉತ್ತರಿಸುವಂತಾಗಬೇಕು ಎಂದು ಆಶಿಸಿದರು.
ಡಿಸೆಂಬರ್ ತಿಂಗಳಲ್ಲಿ ಗೃಹ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು ಸಂಘದ ಸಾಹಿತ್ಯವನ್ನು ಮನೆ ಮನೆಗೂ ತಲುಪಿಸಬೇಕು. ಜನವರಿಯಲ್ಲಿ ವಾರ್ಡ್‌ವಾರು ಹಿಂದು ಸಮ್ಮೇಳನಗಳನ್ನು ಸಂಘಟಿಸಿ, ಮನೆಗಳ ಮೇಲೆ ಓಂಕಾರ ಧ್ವಜ ಹಾರಿಸಿ ಸಮಾಜದ ಕಾರ್ಯಕ್ಕೆ ಜನರನ್ನು ಜೋಡಿಸಿಕೊಳ್ಳುವ ಕೆಲಸ ಆಗಬೇಕು ಎಂದೂ ಹೇಳಿದರು.
ಜಗತ್ತಿನ ಅತಿ ದೊಡ್ಡ ಮಾನವ ಸಂಘಟನೆ ಆರೆಸ್ಸೆಸ್. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಸಂಘದ ಉದ್ದೇಶ ಇಂದಿಗೂ ಬದಲಾಗಿಲ್ಲ. ದೇಶದಲ್ಲಿ 82 ಸಾವಿರ ಶಾಖೆಗಳನ್ನು ಹೊಂದಿದ್ದು 60 ಸಾವಿರ ಊರುಗಳಲ್ಲಿ ಸಂಘದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಸಂಘದ ಶಾಖೆಗಳ ಮೂಲಕ ದಿನದ ಒಂದು ಗಂಟೆ ಚಟುವಟಿಕೆಗಳಲ್ಲಿ ಕಾರ್ಯಕರ್ತರು ತೊಡಗುವುದರಿಂದ ಸಹಜವಾಗಿ ಬದಲಾವಣೆ ಕಾಣಬಹುದು. ಹೀಗಾಗಿ ಆರೆಸ್ಸೆಸ್ ಸಂಸ್ಕಾರದ ಹಾಗೂ ಗುಣ ನಿರ್ಮಾಣದ ಕೇಂದ್ರವಾಗಿದೆ. ಇಂದಿನ ಜಾತಿ ವಿಷಮತೆಯ ಸವಾಲಿನ ನಡುವೆಯೂ ನಾವೆಲ್ಲ ಹಿಂದು, ನಾವೆಲ್ಲ ಒಂದು ಎಂಬ ಭಾವ ಮೂಡಿಸುತ್ತಿದೆ ಎಂದು ಹೇಳಿದರು.
ಸಂಘ ಜನ್ಮ ತಾಳಿದ 9ನೇ ವರ್ಷದಲ್ಲಿ ಶಿಬಿರಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ ಅವರೂ ಕೂಡ ಎಲ್ಲ ಜಾತಿ ಹಾಗೂ ವಂಚಿತ ಸಮೂಹವೂ ಒಳಗೊಂಡಂತೆ ಹಿಂದುಗಳ ಸಂಘಟನೆ ಮಾಡುತ್ತಿರುವ ಸಂಘದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. ಮೊದಲು ಹಿಂದುಗಳಲ್ಲಿದ್ದ ಧರ್ಮರಕ್ಷಣೆಯ ವಿಶ್ವಾಸದ ಕೊರತೆಯಿಂದಾಗಿ ಗುಲಾಮಗಿರಿತನ ಇತ್ತು. ಧರ್ಮ ಸಂರಕ್ಷಣೆಯ ಕಾರಣಕ್ಕೆ ಆರೆಸ್ಸೆಸ್ ಜನ್ಮ ತಾಳಿದೆ ಎಂದರು.
ಹೊರಗಿನಿಂದ ಆರೆಸ್ಸೆಸ್ ನೋಡುವುದಕ್ಕೂ ಒಳಗಿನ ಚಟುವಟಿಕೆ ಗಮನಿಸಿದಾಗ ವ್ಯತ್ಯಾಸ ಕಂಡುಬರಲಿದೆ. ಇದು ಶಿಸ್ತು ಮತ್ತು ಸಮಯಪಾಲನೆಯ ಸಂಘಟನೆಯಾಗಿದ್ದು, ಇಲ್ಲಿನ ಸ್ವಯಂಸೇವಕರು ದೇಶದ ಹಿತದ ದೃಷ್ಟಿಯಿಂದ ಕೆಲಸ ಮಾಡುತ್ತಿದ್ಧಾರೆ. 42 ಭಿನ್ನ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಶಕ್ತಿಶಾಲಿ ರಾಷ್ಟ್ರವಾಗಬೇಕೆಂಬ ಗುರಿಯಡಿ ಯೋಜನಾಬದ್ಧವಾಗಿ ನಿತ್ಯ ಸಾಧನೆ ಮಾಡುತ್ತಿದ್ದಾರೆ. ಇಲ್ಲಿನ ಚಟುವಟಿಕೆಗಳಲ್ಲಿ ದಂಡ ಪ್ರಯೋಗ ಕೂಡ ಆತ್ಮರಕ್ಷಣೆಯ ಭಾಗವಾಗಿದೆ ಎಂದೂ ಹೇಳಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಪ್ರಾಂತ ಸಂಘಚಾಲಕ ಉಮಾಪತಿ, ಜಿಲ್ಲಾ ಸಂಘ ಚಾಲಕ ಜಯರುದ್ರೇಶ್, ನಗರ ಸಂಘಚಾಲಕ ಅಜಿತ್ ಓಸ್ಟಾಲ್ ಇದ್ದರು. ಇದಕ್ಕೂ ಮುನ್ನ ನಗರದ 40ಕ್ಕೂ ಹೆಚ್ಚು ಶಾಖೆಗಳ ಸ್ವಯಂಸೇವಕರು ವಿವಿಧ ಆಟ, ವ್ಯಾಯಾಮ ಚಟುವಟಿಕೆ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಸಿದರು.