ದಾವಣಗೆರೆ: ಸರ್ಕಾರಿ ಹಾಗೂ ಖಾಸಗಿ ಬಸ್ ಚಾಲಕರ ಅಜಾಗರೂಕ ವಾಹನ ಚಾಲನೆಯಿಂದಾಗಿ ಜನರ ಜೀವಕ್ಕೆ ಅಪಾಯ ಎದುರಾಗುತ್ತಿದೆ. ನಿರ್ಲಕ್ಷೃ ಚಾಲನೆಯ ಬಸ್‌ಗಳನ್ನು ಮುಲಾಜಿಲ್ಲದೆ ವಶಕ್ಕೆ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಚಾಲಕರಿಂದ ಹೆಚ್ಚಿದ ಅಜಾಗರೂಕ ಚಾಲನೆಗೆ ಕಡಿವಾಣ ಹಾಕಬೇಕು ಎಂದರು.
ಬಸ್ ಚಾಲಕರಿಗೆ ಸಭೆ ಕರೆದು ಅರಿವು ಮೂಡಿಸಬೇಕು. ತದನಂತರವೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಬಸ್‌ಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು. ಇಂತಹ ಕಠಿಣ ಕ್ರಮ ಕೈಗೊಂಡಲ್ಲಿ ಉಳಿದವರಿಗೂ ಎಚ್ಚರಿಕೆಯಾಗಲಿದೆ. ನಾಲ್ಕೈದು ದಿನ ಬಸ್‌ಗಳನ್ನು ಜಫ್ತು ಮಾಡಿದರೆ ಮಾಲೀಕರಿಗೂ ಸಮಸ್ಯೆಯ ಅರಿವಾಗಲಿದೆ ಎಂದು ಹೇಳಿದರು.
ಖಾಸಗಿ ಬಸ್ಸೊಂದರ ಚಾಳಕನ ಬೇಜವ್ದಾರಿತನದಿಂದಾಗಿ ನನ್ನ ಮಕ್ಕಳೂ ಅಪಾಯಕ್ಕೆ ಸಿಲುಕಿದ್ದರು. ಆದರೆ ಅವರು ಬದುಕಿದ್ದೇ ಪುಣ್ಯ ಎಂದು ಎಸ್ಪಿ ಉಮಾ ಪ್ರಶಾಂತ್ ಇದೇ ವೇಳೆ ತಿಳಿಸಿದರು.
ಕೆಲವು ಆಟೋರಿಕ್ಷಾ ಚಾಲಕರು ಅನುಚಿತವಾಗಿ ವರ್ತಿಸುತ್ತಿದ್ದಾರೆ. ಜನನಿಬಿಡ ತಾಣಗಳಲ್ಲಿ ಮಹಿಳೆಯರ ಎದುರೇ ಮೂತ್ರ ವಿಸರ್ಜನೆಯ ವಿಡಿಯೋ ಒಂದನ್ನು ನನಗೆ ಕಳಿಸಿದ ಸಾರ್ವಜನಿಕರೊಬ್ಬರು ದೂರು ನೀಡಿದ್ದರು. ನಾಗರಿಕತೆಯನ್ನೂ ನಾವೇ ಕಲಿಸಿ ಕೊಡಬೇಕಾ? ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಕಿಡಿ ಕಾರಿದರು.
ಕೆಲವು ಆಟೋಗಳಲ್ಲಿ ಮಿತಿ ಮೀರಿ ಮಕ್ಕಳು ಹಾಗೂ ಜನರನ್ನು ಹತ್ತಿಸಿಕೊಳ್ಳಲಾಗುತ್ತಿದೆ. ಮೀಟರ್ ಅಳವಡಿಸಿಕೊಳ್ಳುತ್ತಿಲ್ಲ. ನಗರದಲ್ಲಿ ಸಂಚರಿಸುವ ಆಟೋಗಳ ಪಟ್ಟಿ ಕೇಳಿದ್ದೂ ಆಟೋ ಸಂಘದವರು ಸ್ಪಂದಿಸಿಲ್ಲ. ಇಂತಹ ವರ್ತನೆ ಬದಲಿಸಿಕೊಳ್ಳಬೇಕು ಎಂದು ತಿಳಿಸಿದರು.
ಆಟೋರಿಕ್ಷಾಗಳ ನಿಲುಗಡೆ ಜಾಗಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ನಿಲುಗಡೆ ಇಲ್ಲದ ಸ್ಥಳಗಳಲ್ಲಿ ಆಟೋಗಳು ನಿಂತು ಜನರಿಗೆ ಸಮಸ್ಯೆಯಾಗಬಾರದು. ಈ ಬಗ್ಗೆ ಪಾಲಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಬಹಳಷ್ಟು ಆಟೋಗಳಿಗೆ ಎಫ್.ಸಿ. ಇಲ್ಲ, ಇವು 15 ವರ್ಷ ಮೀರಿವೆ ಎಂದು ಆರ್.ಟಿ.ಒ. ಪ್ರಮುತೇಶ್ ತಿಳಿಸಿದಾಗ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆಯೂ ಡಿಸಿ ಆದೇಶಿಸಿದರು.
ಜಗಳೂರು ರಸ್ತೆ ಕಿಷ್ಕಿಂಧೆಯಂತಾಗಿದೆ. ಈ ಸಮಸ್ಯೆ ಬಗೆಹರಿಸಲು ರಿಂಗ್ ರಸ್ತೆ ನಿರ್ಮಿಸಬೇಕಿದೆ. ಇಲ್ಲವೇ ಮುಖ್ಯರಸ್ತೆಯಲ್ಲಿ ವಾಹನಗಳ ನಿಲುಗಡೆ ತಪ್ಪಿಸಿ, ಬೇರೆಡೆ ನಿಲುಗಡೆಗೆ ವ್ಯವಸ್ಥೆ ಮಾಡಬೇಕಿದೆ. ಈ ಬಗ್ಗೆ ಶಾಸಕರ ಜತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್‌ಕುಮಾರ್, ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ್, ಸೈಬರ್ ಅಪರಾಧ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಮತ್ತಿತರರಿದ್ದರು.
ಗುಂಡಿ ಮುಚ್ಚಲು ತಾಕೀತು
ಮಳೆಗಾಲದಲ್ಲಿ ರಸ್ತೆಗಳಿಗೆ ಬಿದ್ದಿರುವ ಗುಂಡಿಗಳನ್ನು ಮಾಸಾಂತ್ಯದೊಳಗೆ ಮುಚ್ಚಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಿ. ನರೇಂದ್ರ ಬಾಬು ತಿಳಿಸಿದರು. ರಸ್ತೆ ಗುಂಡಿಗಳನ್ನು ಮುಚ್ಚಲು ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.
ಅಪಘಾತದಲ್ಲಿ 320 ಮಂದಿ ಸಾವು
ಕಳೆದ ವರ್ಷ ಜಿಲ್ಲೆಯಲ್ಲಿ ಅಪಘಾತಗಳಿಂದ 320 ಜನರ ಸಾವು ಸಂಭವಿಸಿವೆ. ಇದನ್ನು ತಡೆಯಲು ಅಪಘಾತ ವಲಯಗಳನ್ನು ಸರಿಪಡಿಸಬೇಕಿದೆ. ಅಪಘಾತಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾದಾಗ ಕೇಂದ್ರ ಸರ್ಕಾರದ ಉನ್ನತ ಆಯೋಗದ ಪರಿಶೀಲಿಸಲಿದೆ ಎಂದೂ ಎಂದೂ ಡಿಸಿ ಹೇಳಿದರು.
ಯಾರದ್ರೀ ಹರಿಹರದ ಮುಖ್ಯರಸ್ತೆ..?
ಹರಿಹರದಲ್ಲಿ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗ ಕಲ್ಪಿಸಬೇಕಿದೆ. ಅಮರಾವತಿಯಿಂದ ಗುತ್ತೂರಿನವರೆಗೆ ಹೊಸ ರಸ್ತೆ ನಿರ್ಮಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಆದರೆ, ಈ ರಸ್ತೆ ನಗರಸಭೆ ಅಥವಾ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುತ್ತದೆಯೋ ಎಂಬ ಬಗ್ಗೆ ಅಧಿಕಾರಿಗಳೇ ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ರಸ್ತೆಯ ಕುರಿತ ಮಾಹಿತಿಯನ್ನು ಪರಿಶೀಲಿಸಿ ತಮಗೆ ಸಲ್ಲಿಸುವಂತೆ ಸೂಚಿಸಿದರು.