ದಾವಣಗೆರೆ: ಹೊನ್ನಾಳಿಯಲ್ಲಿ 60 ರಿಂದ 70 ಎಕರೆ ವಕ್ಫ್ ಬೋರ್ಡ್ ಇಲ್ಲವೇ ಮಸೀದಿಗಳ ಹೆಸರಿಗೆ ಭೂಮಿ ಕೊಡಲಾಗಿದೆ. ಕೂಡಲೇ ವಕ್ಫ್ ಬೋರ್ಡ್ ಹೆಸರಿನಲ್ಲಿರುವ ಎಲ್ಲ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಮಂಗಳವಾರ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ವಿಜಯಪುರದಲ್ಲಿ ಭುಗಿಲೆದ್ದಿರುವ ವಕ್ಫ್ ಆಸ್ತಿ ವಿಚಾರದ ಜಾಡು ಹಿಡಿದು ಹೊರಟರೆ ರಾಜ್ಯದ ಎಲ್ಲ ಜಿಲ್ಲೆೆಗಳಲ್ಲೂ ವಕ್ಫ್ ಬೋರ್ಡ್ ಹೆಸರಿಗೆ ಸರ್ಕಾರಿ ಭೂಮಿ ಸೇರ್ಪಡೆಯಾದ ಅನುಮಾನವಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಆರಂಭವಾಗಲಿದೆ ಎಂದರು.
ಸುಂಕದಕಟ್ಟೆ ಗ್ರಾಮ ಸಮೀಪದ ಸ.ನಂ 22 ರಲ್ಲಿ ಸುಮಾರು 8.11 ಎಕರೆ ಜಾಗ ಜುಮ್ಮಾ ಮಸೀದಿ ಹೆಸರಿನಲ್ಲಿಡಲಾಗಿದೆ. ವಿಶೇಷವೇನೆಂದರೆ ಸುಂಕದಕಟ್ಟೆ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ. ಒಬ್ಬರೂ ವಾಸಿಸುತ್ತಿಲ್ಲ. ಹೀಗಿದ್ದರೂ, ತಹಸೀಲ್ದಾರ್ ಈ ಭೂಮಿಯನ್ನು ಜುಮ್ಮಾ ಮಸೀದಿಗೆ ಸೇರ್ಪಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ಅದೇ ರೀತಿ ತುಂಗಭದ್ರಾ ನದಿ ಸಮೀಪದ ಸುಮಾರು 6 ಕೋಟಿಗೂ ಹೆಚ್ಚು ಬೆಲೆ ಬಾಳುವ ಭೂಮಿ ವಕ್ಫ್ ಹೆಸರಿನಲ್ಲಿದೆ. ಶಿವಮೊಗ್ಗ ಮುಖ್ಯರಸ್ತೆಯ ತೋಟಗಾರಿಕಾ ಕಚೇರಿ ಸಮೀಪದ 27 ಗುಂಟೆ ಭೂಮಿಯನ್ನು ಕೆಲ ಮುಸ್ಲಿಮರು ಕಬಳಿಸಲು ಹೊರಟಿದ್ದನ್ನು ನಾನು ತಡೆಹಿಡಿದಿದ್ದೆ ಎಂದರು.
ಶ್ರೀ ರಾಘವೇಂದ್ರ ಮಠದ ಸಮೀಪದ 12 ಎಕರೆ ಜಾಗ ಸೇರಿದಂತೆ 70 ಕ್ಕೂ ಹೆಚ್ಚು ಭೂಮಿ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂಬ ಮಾಹಿತಿ ಇದೆ ಎಂದರು.
ಸುಂಕದಕಟ್ಟೆ ಗ್ರಾಮಸ್ಥರು 8.11 ಎಕರೆ ಜಮೀನು ಬಿಟ್ಟುಕೊಡುವುದಿಲ್ಲ ಎಂದು ವಕ್ಫ್ ಬೋರ್ಡ್ ನ್ಯಾಯಮಂಡಳಿಗೆ ಹೋಗಿದ್ದಾರೆ. ಇದು ನ್ಯಾಯಮಂಡಳಿಯಲ್ಲಿದ್ದು ಊರಿನ ಮುಖಂಡರು ಕೋರ್ಟ್‌ಗೆ ಓಡಾಡುತ್ತಿದ್ದಾರೆ ಎಂದ ಅವರು, ಮಠ, ಮಾನ್ಯಗಳಿಗೆ, ಶಾಲಾ ಕಾಲೇಜುಗಳಿಗೆ ಸಿಗದ ಭೂಮಿ ವಕ್ಫ್ ಬೋರ್ಡ್‌ಗೆ ಹೇಗೆ ಸಿಗುತ್ತದೆ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 3 ಉಪಚುನಾವಣೆ ಬಂದಿರುವುದರಿಂದ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಮತ ಪಡೆಯುವುದಕ್ಕಾಗಿ ಅವರನ್ನು ಓಲೈಕೆ ಮಾಡಲು ಈ ವಿಷಯ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಆದರೆ, ನಾನು ಒಂದೇ ಒಂದು ಗುಂಟೆ ಜಾಗ ವಕ್ಫ್ ಬೋರ್ಡ್‌ಗೆ ಬಿಟ್ಟುಕೊಡುವುದಿಲ್ಲ. ಬೇಕಾದರೆ ರಕ್ತಕ್ರಾಂತಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್ ಹಾಗೂ ಸುಂಕದಕಟ್ಟೆ ಗ್ರಾಪಂ ಸದಸ್ಯ ಎಸ್. ಮಂಜಪ್ಪ ಇತರರಿದ್ದರು.