ದಾವಣಗೆರೆ: ಒಳಪಂಗಡಗಳ ಹಾವಳಿಯಿಂದಾಗಿ ವೀರಶೈವ ಲಿಂಗಾಯತ ಸಮಾಜ ಬುಡಮೇಲಾಗುತ್ತಿದೆ. ಒಂದಾಗಲು ಹಿನ್ನಡೆಯಾಗುತ್ತಿದೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ವಿಷಾದ ವ್ಯಕ್ತಪಡಿಸಿದರು.
ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 39ನೇ ಮತ್ತು ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 14ನೇ ವರ್ಷದ ಪುಣ್ಯಾರಾಧನೆ, ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ಮಾತನಾಡಿದರು.
ಶೃಂಗ ಸಭೆ ಮೂಲಕ ಪಂಚಪೀಠಾಧೀಶರಿಂದ ಸಮಾಜ ಒಗ್ಗೂಡಿಸುವ ಪ್ರಯತ್ನ ನಡೆಯಿತು. ಇದು ಕೆಲವರಿಗೆ ಕಸಿವಿಸಿ ತರಿಸಿತು. ಕೆಲವು ರಾಜಕಾರಣಿಗಳು ಸ್ವಾರ್ಥಕ್ಕಾಗಿ ಒಗ್ಗೂಡಿಸುವುದಾಗಿ ಹೇಳುತ್ತಿದ್ದಾರೆ. ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಒಗ್ಗೂಡದಂತೆ ನೋಡಿಕೊಳ್ಳುತ್ತಿದ್ದಾರೆ ಎಂದೂ ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಂದೆಡೆ ಸ್ವಾಮೀಜಿಗಳ ಬಡಿದಾಟ, ಇನ್ನೊಂದೆಡೆ ರಾಜಕಾರಣಿಗಳ ನಡುವೆ ಕುರ್ಚಿ ಪೈಪೋಟಿ ನಡೆಯುತ್ತಿದೆ. ಜಾತಿಗಣತಿಯಲ್ಲಿ ಹೆಸರು ಬರೆಸುವಲ್ಲೇ ನಮ್ಮಲ್ಲಿ ಗೊಂದಲ ನಡೆದವು. ಸೂರ್ಯ ಚಂದ್ರರು ಹೇಗೆ ಕೂಡುವುದಿಲ್ಲವೋ ವೀರಶೈವರು ಲಿಂಗಾಯತರು ಒಂದುಗೂಡಲಾರರು ಎಂಬ ಭಾವನೆ ಕಾಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿರು.
ಜಾತಿಗಣತಿ ಮೂಲಕ ಅನ್ಯ ಸಮಾಜಗಳು ಒಂದಾಗಿ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದರೆ ನಾವಿನ್ನೂ ವಿಭಜನೆ ಆಗುತ್ತಲಿದ್ದೇವೆ. ರಾಜ್ಯದಲ್ಲಿ ಅತ್ಯಂತ ಪ್ರಬಲವಾದ ವೀರಶೈವ ಲಿಂಗಾಯತ ಸಮಾಜದ ಶಕ್ತಿಯನ್ನು ನಾವು ಕುಂದಿಸಿತ್ತಿದ್ದೇವೆ. ಈ ಹಿಂದೆಯೂ ನಮ್ಮನ್ನು ವಿಭಜನೆ ಮಾಡಿದ್ದ ರಾಜ್ಯ ಸರ್ಕಾರ ಜಾತಿಗಣತಿ ನೆಪದಲ್ಲಿ ಈಗಲೂ ಶಕ್ತಿ ಕುಂದಿಸುತ್ತಿದೆ ಎಂದು ದೂರಿದರು.
ಸಮಾಜವನ್ನು ಒಗ್ಗೂಡಿಸುವುದಾಗಿ ಹೇಳುವ ರಾಜಕಾರಣಿಗಳು ಮೊದಲು ತಂತಮ್ಮ ಮನೆಗಳಲ್ಲಿ ಸ್ವಾಮೀಜಿಗಳ ಭಾವಚಿತ್ರಗಳನ್ನು ಹಾಕಿಕೊಳ್ಳಲಿ ಎಂದು ಸವಾಲು ಹಾಕಿದ ಶಿವಶಂಕರ್, ಪಂಚಪೀಠಾಧೀಶರು ಕೂಡ ಸಮಾಜವನ್ನು ಒಗ್ಗೂಡಿಸುವ ವಿಚಾರದಲ್ಲಿ ನಿರ್ಲಿಪ್ತವಾಗಿರಲಿ. ದೇವರ ಇಚ್ಛೆ ಇದ್ದಲ್ಲಿ ಒಂದಾಗಬಹುದು. ಅಲ್ಲಿಯವರೆಗೂ ಪ್ರಯತ್ನ ಮುಂದುವರಿಸುವುದು ಬೇಡ ಎಂದೂ ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಮಾನವ ಧರ್ಮಕ್ಕೆ ಜಯವಾಗಲಿ, ಬೆಳಗು ಪಂಚಾಚಾರ್ಯ ತತ್ವವೇ, ಬೆಳಗು ಬಸವ ತತ್ವವೇ ಎಂಬ ಕರೆಯೊಂದಿಗೆ ಪಂಚಪೀಠಗಳು ಕೆಲಸ ಮಾಡಿವೆ. ವಾಗೀಶ ಪಂಡಿತಾರಾಧ್ಯರ ಅವಧಿಯಲ್ಲಿ ಶ್ರೀಶೈಲ ಪೀಠ ಸುವರ್ಣಯುಗವನ್ನೇ ಕಂಡಿತ್ತು. ಬಹುಭಾಷಾ ಪಾರಂಗತರು, ಆಯುರ್ವೇದ ಪಂಡಿತರೂ ಆಗಿದ್ದ ಶ್ರೀಗಳು ಸ್ವಾತಂತ್ರ್ಯ ಸಂಗ್ರಾಮದಲ್ಲೂ ತೊಡಗಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಲಿಂ. ಉಮಾಪತಿ ಪಂಡಿತಾರಾಧ್ಯ ಸ್ವಾಮೀಜಿ ಅವರು ಅನ್ನ ದಾಸೋಹವಲ್ಲದೆ ಅರಿವಿನ ದಾಸೋಹವನ್ನು ನೀಡಿದ್ದಾರೆ ಈಗಿನ ಚನ್ನಸಿದ್ಧರಾಮ ಸ್ವಾಮೀಜಿ ಕೂಡ ಪೀಠದ ಶ್ರೇಯೋಭಿವೃದ್ಧಿಗಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ ನಡೆಸುತ್ತಿದ್ದಾರೆ ಎಂದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ವೀರಶೈವ ಸ್ವಾಮೀಜಿಗಳು ಮಠದಲ್ಲಿ ಪೂಜೆ-ಧ್ಯಾನಕ್ಕೆ ಸೀಮಿತರಾಗದೆ ರಾಜ್ಯ ಮತ್ತು ದಕ್ಷಿಣ ಭಾರತದಲ್ಲಿನ ಎಲ್ಲ ವೀರಶೈವರನ್ನು ಒಗ್ಗೂಡಿಸಿ ಧರ್ಮಜಾಗೃತಿ ಮಾಡುತ್ತಿದ್ದಾರೆ. ವೀರಶೈವ ಪರಂಪರೆ ಅಭಿವೃದ್ಧಿಗೆ ತ್ಯಾಗ ಮಾಡಿದ್ದಾರೆ ಎಂದರು.
ವೀರಶೈವ ಲಿಂಗಾಯತ ಧರ್ಮವನ್ನು ಸೂರ್ಯ ಚಂದ್ರರಿರುವವರೆಗೆ ಮುನ್ನಡೆಸುವ ಕರ್ತವ್ಯ ನಮ್ಮೆಲ್ಲರದು. ವೀರಶೈವ ಧರ್ಮವನ್ನು ವಿಶ್ವಗುರುವಾಗಿಸಬೇಕಿದೆ. ವೀರಶೈವರ ಎಲ್ಲಾ ವಿಚಾರಗಳನ್ನು ವಿಶ್ವಕ್ಕೆ ಪರಿಚಯಿಸುವ ಅಗತ್ಯತೆ ನಮ್ಮೆಲ್ಲರ ಮೇಲಿದೆ ಎಂದು ಆಶಿಸಿದರು.
ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆವರಗೊಳ್ಳ ಓಂಕಾರ ಶಿವಾಚಾರ್ಯ ಸ್ವಾಮೀಜಿ, ರಾಮಘಟ್ಟದ ರೇವಣಸಿದ್ಧ ಸ್ವಾಮೀಜಿ, ಬಸವನ ಬಾಗೇವಾಡಿಯ ಒಡೆಯರ್ ಶಿವಪ್ರಕಾಶ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಸಾಹಿತಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ವೀರಶೈವ ಧರ್ಮ ಪೋಷಿಸಿದ ರಾಜ ಮನೆತನಗಳು ಕುರಿತು ಮಾತನಾಡಿದರು. ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಮುರುಗೇಶ್ ಆರಾಧ್ಯ, ವಿದ್ವಾನ್ ಆನಂದ ಪಾಟೀಲ ಇದ್ದರು. ಶಿವಾನಂದಪ್ಪ ಸ್ವಾಗತಿಸಿದರು. ಸೌಭಾಗ್ಯಮ್ಮ ಎಸ್. ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.
---