ದಾವಣಗೆರೆ: ಬಿಪಿಎಲ್ ಕಾರ್ಡ್, ಪಡಿತರ ಧಾನ್ಯ ಪಡೆಯಲಿಕ್ಕೆ ಮಾತ್ರ ಸೀಮಿತವಿರದೆ, ಆಯುಷ್ಮಾನ್ ಭಾರತ, ಆರೋಗ್ಯ, ವಸತಿ ಯೋಜನೆ, ಮನೆ ಸಾಲ ಇತರ ಸರ್ಕಾರಿ ಅನುಕೂಲತೆಗಾಗಿ ಬಡವರಿಗಾಗಿ ಇರುವ ಪ್ರಮುಖಾಸ್ತ್ರ. ಆದರೆ ಪಡಿತರ ಹೊರತಾದ ಲಾಭಕ್ಕಾಗಿ ಹೆಚ್ಚು ಬೇಡಿಕೆ ಇರುವ ಕಾರಣಕ್ಕೆ ಅನರ್ಹ ಪಡಿತರದಾರರ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಇ-ಆಡಳಿತ ಇಲಾಖೆಯ ಕುಟುಂಬ ತಂತ್ರಾಂಶ ದತ್ತಾಂಶ ಗುರುತಿಸಿದಂತೆ ಜಿಲ್ಲೆಯಲ್ಲಿ 48,925 ಅನರ್ಹ ಪಡಿತರ ಚೀಟಿದಾರರಿದ್ದಾರೆ. ಈ ಮಾಹಿತಿಯ ಪ್ರಕಾರ, 2,658 ಪಡಿತರದಾರರು ಆದಾಯ ತೆರಿಗೆ ಪಾವತಿದಾರರಿದ್ದಾರೆ. 78 ಕುಟುಂಬದವರು ಸರ್ಕಾರಿ ನೌಕರರಿದ್ದಾರೆ. ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದ 44,615 ಕುಟುಂಬದವರು ಈ ಪಟ್ಟಿಯಲ್ಲಿದ್ದಾರೆ.
ಎಪಿಎಲ್‌ಗೆ ಬದಲಾವಣೆ
ಕಳೆದೊಂದು ತಿಂಗಳ ಕಾಲ ಕಸರತ್ತು ನಡೆಸಿದ ಆಹಾರ ನಾಗರಿಕ ಪೂರೈಕೆ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದರಲ್ಲಿ 1672 ಜನರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಬದಲಾವಣೆ ಮಾಡಿದ್ದಾರೆ. ಇದರಲ್ಲಿ 565 ಕಾರ್ಡ್‌ದಾರರ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದೆ. ಬಿಪಿಎಲ್ ಪಡೆದಿದ್ದ 34 ಮಂದಿ ಸರ್ಕಾರಿ ನೌಕರರಿಗೆ 78370 ರೂ. ದಂಡ ವಿಧಿಸಲಾಗಿದೆ. ದಂಡ ಭರಿಸದವರಿಗೆ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ.
ಆದಾಯ ತೆರಿಗೆ ಪಾವತಿದಾರರು ಎಂಬುದಾಗಿ ಗುರುತಿಸಲ್ಪಟ್ಟ 1073 ಪಡಿತರದಾರರನ್ನು ಬಿಪಿಎಲ್ ಪಟ್ಟಿಯಿಂದ ಹೊರಗಿಡಲಾಗಿದೆ. ಇತ್ತೀಚೆಗೆ ಸರ್ಕಾರ, ಆಧಾರ್‌ಕಾರ್ಡ್ ಜತೆ ಪ್ಯಾನ್ ಕಾರ್ಡ್ ಲಿಂಕ್‌ಗೆ ಗಡುವು ನೀಡಿತ್ತು. ಅದರ ತರುವಾಯವೂ ಕೆಲವರು 100 ರೂ. ದಂಡ ಭರಿಸಿ ಲಿಂಕ್ ಮಾಡಿಸಿಕೊಂಡವರೂ ಇದ್ದಾರೆ.
ಅವರಲ್ಲಿ ಬಹುತೇಕರು ತಾಂತ್ರಿಕ ದೋಷದ ಕಾರಣಕ್ಕೆ ತಪ್ಪಾಗಿ ನಮೂದಾದ ಕಾರಣಕ್ಕೆ ಬಿಪಿಎಲ್ ಪಟ್ಟಿಯಿಂದ ಹೊರದಬ್ಬಲ್ಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಎರಡನೇ ಹಂತದ ತೂಗುಗತ್ತಿಯಲ್ಲಿ ನಮ್ಮ ಕಾರ್ಡ್ ಬರಬಹುದೆ ಎಂದು ಅರ್ಹರೂ ಚಿಂತೆಗೀಡಾಗಿದ್ದಾರೆ. ಈಗಾಗಲೆ ಎಪಿಎಲ್‌ಗೆ ವರ್ಗಾಯಿಸಲ್ಪಟ್ಟವರು ಆಹಾರ ಇಲಾಖೆ ಶಾಖೆಗಳಿಗೆ ಎಡತಾಕುತ್ತಿದ್ದಾರೆ.
ಕೆಲವು ರಾಜ್ಯಗಳಲ್ಲಿ ಬಿಪಿಎಲ್ ಕಾರ್ಡ್ ಪಡಿತರಕ್ಕೆ ಸೀಮಿತ. ಆದರೆ ಕರ್ನಾಟಕದಲ್ಲಿ ಇದು ಎಲ್ಲ ಲಾಭಕ್ಕೂ ಸರ್ವಾಂತರಯಾಮಿಯಾಗಿದೆ. ಎಪಿಎಲ್‌ಗೆ ಬದಲಾದಲ್ಲಿ ವಾರ್ಷಿಕ 5 ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆ ಲಾಭ ಪಡೆಯಬಹುದಾದ ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ ಮರೀಚಿಕೆಯಾಗಲಿದೆ. ಬಿಪಿಎಲ್ ಪಡಿತರ ಚೀಟಿಗಾಗಿ ಹೊಸ ಅರ್ಜಿ ಸಲ್ಲಿಕೆ ಯಾವಾಗ ಎಂದು ಕೇಳುವವರಿದ್ದಾರೆ. 1399 ಕುಟುಂಬದ ಅರ್ಜಿ ಬಾಕಿ ಪಟ್ಟಿಯಲ್ಲಿ ಉಳಿದಿವೆ.
ಗಂಭೀರ ರೋಗಿಗಳಿಗೆ ತೊಂದರೆ
ತೀವ್ರ ಅನಾರೋಗ್ಯಕ್ಕೆ ತುತ್ತಾದವರು, ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು, ಡಯಾಲಿಸಿಸ್ ಸೇವೆ ಪಡೆಯುವವರು, ತುರ್ತು ಶಸ್ತ್ರಚಿಕಿತ್ಸೆ ಬಯಸುವವರು ಬಿಪಿಎಲ್ ಕಾರ್ಡ್‌ಗಾಗಿ ಆಹಾರ ಇಲಾಖೆಗೆ ಸಂಪರ್ಕ ಮಾಡುತ್ತಿದ್ದಾರೆ. ತಿಂಗಳಿಗೆ ನಾಲ್ಕಕ್ಕೂ ಹೆಚ್ಚು ರೋಗಿಗಳ ಸಂಬಂಧಗಳು ಕಚೇರಿಗೆ ಬರುತ್ತಿದ್ದಾರೆ. ಆದರೆ ಈಗಿರುವ ಗೊಂದಲದ ನಡುವೆ ಆರೋಗ್ಯ ಸೇವೆ ಪಡೆಯಲೂ ಸಹ ಸಂಕಷ್ಟ ಎದುರಾಗಿದೆ.
ಇನ್ನೊಂದೆಡೆ 49 ಸಾವಿರ ಕುಟುಂಬಗಳಿಗೂ ಭವಿಷ್ಯದಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ ಲಾಭ ಪಡೆಯುವ ಅವಕಾಶ ತಪ್ಪಿಹೋಗುವ ಆತಂಕವೂ ಎದುರಾಗಿದೆ. ಅರ್ಹರು ಎಪಿಎಲ್ ಪಟ್ಟಿಗೆ ಒಳಪಟ್ಟಿದ್ದಲ್ಲಿ ಆಹಾರ ನಿರೀಕ್ಷಕರಿಂದ ಮೊದಲಿನ ಸ್ಥಿತಿಗೆ ತರಲು ಅವಕಾಶ ನೀಡಲಾಗಿಲ್ಲ. ಇಲಾಖೆ ಮಟ್ಟದಲ್ಲೇ ಇದು ಇತ್ಯರ್ಥವಾಗಬೇಕಿದೆ ಎನ್ನಲಾಗುತ್ತಿದೆ.
ಆಹಾರ ಇಲಾಖೆಯೇತರ ಅಧಿಕಾರಿಗಳೇ ರಾಜ್ಯ ಮಟ್ಟದಲ್ಲಿ ಇದರ ನಿಯಂತ್ರಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಪಿಎಲ್ ಪಟ್ಟಿಯ ಜೇನುಗೂಡಿಗೆ ಸರ್ಕಾರ ಕೈ ಹಾಕಿದೆ. ಬದಲಾದ ದುಬಾರಿ ಕಾಲದಲ್ಲಿ ಕುಟುಂಬದ ವಾರ್ಷಿಕ ಆದಾಯ ಮಿತಿ ನಿಯಮ ಪರಿಷ್ಕರಣೆ ಆಗದೆ ಬಿಪಿಎಲ್ ಪಟ್ಟಿಗಳ ಬದಲಾವಣೆ ಸೂಕ್ತವಲ್ಲ ಎಂಬುದು ಕೆಲ ಪ್ರಾಜ್ಞರ ಮಾತು.
4.16 ಲಕ್ಷ ಫಲಾನುಭವಿಗಳು
ಜಿಲ್ಲೆಯಲ್ಲಿ ಹಾಲಿ 4,16,812 ಪಡಿತರ ಕುಟುಂಬಗಳಿವೆ. ಇದರಲ್ಲಿ 44960 ಅಂತ್ಯೋದಯ-ಅನ್ನ ಯೋಜನೆ, 3,23,596 ಬಿಪಿಎಲ್ (ಆದ್ಯತಾ ವಲಯ), 48256 ಎಪಿಎಲ್ ಯೋಜನೆಯಡಿ ಒಳಪಟ್ಟಿದ್ದಾರೆ. 44891 ರಾಜ್ಯ ಸರ್ಕಾರದ ಮಿತಿಗೊಳಪಟ್ಟ ಬಿಪಿಎಲ್ ಕಾರ್ಡುದಾರರಿದ್ದಾರೆ. ಆದಾಯ ಮಿತಿ ಮೀರಿದ 44,615 ಕಾರ್ಡ್‌ದಾರರ ಭವಿಷ್ಯ ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ.
--------------------