ಜಿಲ್ಲೆ

ಅನುದಾನಕ್ಕೆ ಸರ್ಕಾರದ ಅವಲಂಬನೆ ಬೇಡ   ಪಂಡಿತಾರಾಧ್ಯ ಶ್ರೀ ಸಲಹೆ  ರಂಗಾಯಣ ಚಟುವಟಿಕೆ ಆರಂಭ

ಡಿ. ಎಂ. ಮಹೇಶ್

ದಾವಣಗೆರೆ: ವೃತ್ತಿ ರಂಗಭೂಮಿ ರಂಗಾಯಣ, ಅನುದಾನಕ್ಕಾಗಿ ಸರ್ಕಾರದ ಮೇಲೆ ಅವಲಂಬನೆಯಾಗದೆ ಜನರ ಬಳಿಗೆ ಹೋಗಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ನಗರದ ಬಾಪೂಜಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೃತ್ತಿ ರಂಗಭೂಮಿ ರಂಗಾಯಣ ಚಟುವಟಿಕೆಗಳ ಆರಂಭೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಕಷ್ಟಪಡುತ್ತಿದೆ. ಹೀಗಾಗಿ ರಂಗಾಯಣಕ್ಕೆ ಮೊದಲಿನಂತೆ ಅನುದಾನ ಸಿಗುವುದು ಅನುಮಾನ ಎಂದು ಆತಂಕ ವ್ಯಕ್ತಪಡಿಸಿದರು.
ರಂಗಭೂಮಿಗೆ ಸರ್ಕಾರದ ಉದಾರ ನೆರವು ಕೇಳುವುದನ್ನು ಕೈಬಿಟ್ಟು, ರಂಗ ಚಟುವಟಿಕೆಗಳಿಗೆ ಅಗತ್ಯ ಅನುದಾನವನ್ನು ಜನರಿಂದ ಹೊಂದಿಸಿಕೊಳ್ಳಲು ಪ್ರಯತ್ನಿಸಬೇಕು. ಸಾಣೇಹಳ್ಳಿಯ ಶಿವಸಂಚಾರ ತಂಡ ಈ ನಿಟ್ಟಿನಲ್ಲಿ ಯಶಸ್ಸು ಕಂಡಿದೆ ಎಂದ ಅವರು, ಆರು ವರ್ಷಗಳಿಂದ ವೃತ್ತಿ ರಂಗಭೂಮಿ ರಂಗಾಯಣ ಆರು ರೂಪಾಯಿ ಕೆಲಸವನ್ನೂ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೃಶ್ಯ ಮಾಧ್ಯಮ ಪ್ರಭಾವದ ಕಾಲದಲ್ಲಿ ರಂಗಭೂಮಿ ಉಳಿಸಿಕೊಳ್ಳುವ ಸವಾಲು ನಮ್ಮ ಮುಂದಿದೆ. ಜನರನ್ನು ಸೆಳೆಯಲು ದ್ವ್ವಂದ್ವಾರ್ಥದ ಸಂಭಾಷಣೆ, ಕುಣಿತ ಹಾಗೂ ಹಾಡುಗಳ ಪರಿಣಾಮವಾಗಿ ವೃತ್ತಿ ರಂಗಭೂಮಿ ನಾಟಕಗಳು ಒಂದು ವರ್ಗಕ್ಕೆ ಸೀಮಿತವಾಗುತ್ತಿವೆ. ನಾಟಕಗಳು ಮನರಂಜನೆಗೆ ಮೀಸಲಾಗದೆ ಮನಸ್ಸನ್ನು ವಿಕಾಸಗೊಳಿಸಬೇಕು ಎಂದು ತಿಳಿಸಿದರು.

ಜಾಗತಿಕ ರಂಗಮಂದಿರ ನಿರ್ಮಾಣವಾಗಲಿ
ರಾಜ್ಯದ ಮಧ್ಯಬಿಂದು ದಾವಣಗೆರೆಯಲ್ಲಿ, ವಿಶ್ವ ರಂಗಭೂಮಿ ಗಮನ ಸೆಳೆಯಬಲ್ಲ ಜಾಗತಿಕ ಮಟ್ಟದ ರಂಗಮಂದಿರ ನಿರ್ಮಿಸುವ ಅಗತ್ಯವಿದೆ. ನಾಟಕಗಳತ್ತ ಜನರನ್ನು ಸೆಳೆಯಲು ಇದು ನೆರವಾಗಲಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಥಾಯ್ಲೆಂಡ್‌ನಲ್ಲಿ ಸಿಯಾಮ್ ನಿರಾಮಿತ್ ಎಂಬ ಅದ್ಭುತ ರಂಗಮಂದಿರವಿದೆ. 500 ಕಲಾವಿದರು ಏಕಕಾಲಕ್ಕೆ ತಾಲೀಮು ನಡೆಸಬಹುದಾದ ಇಲ್ಲಿ 2 ಸಾವಿರ ಜನರು ಕೂತು ನಾಟಕ ವೀಕ್ಷಿಸುವ ಅವಕಾಶವಿದೆ. ವಿದೇಶಿಗರಲ್ಲಿ  ನಾಟಕದ ಮೇಲಿನ ಪ್ರೀತಿ ಜೀವಂತವಿದ್ದು, ನಾಟಕ- ಸಂಗೀತ ಅವರ ಸಂಸ್ಕೃತಿಯ ಭಾಗವಾಗಿವೆ ಎಂದರು.
ಕೊಂಡಜ್ಜಿಯ 10 ಎಕರೆ ಜಾಗದಲ್ಲಿ ರಂಗಾಯಣದಿಂದ ಅತ್ಯುತ್ತಮ ರಂಗಭೂಮಿ ಕಟ್ಟಬಹುದು. ನಾಟಕದ ಮೇಲೆ ಅಪಾರ ಪ್ರೀತಿ ಉಳಿಸಿಕೊಂಡಿರುವ ದಾವಣಗೆರೆಯ ಜನರು ಇದಕ್ಕೆ ಕೈಜೋಡಿಸುವ ನಂಬಿಕೆ ಇದೆ. ಸಿ.ಬಸವಲಿಂಗಯ್ಯ ನಿರ್ದೇಶನದ ‘ಮಲೆಗಳಲ್ಲಿ ಮದುಮಗಳು’ ನಾಟಕ ಪ್ರದರ್ಶಿಸಿ ಹಣ ಸಂಗ್ರಹಿಸಲು ಮುಂದಾದರೆ ನಾನೂ ಕೈಜೋಡಿಸುತ್ತೇನೆ ಎಂದು ಹೇಳಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ ದಾವಣಗೆರೆಯಲ್ಲಿ ಎರಡು ವರ್ಷಗಳಿಂದ ಕಲೆ, ರಂಗಭೂಮಿಗೆ ಆದ್ಯತೆ ಸಿಗುತ್ತಿದೆ. ವೃತ್ತಿ ರಂಗಭೂಮಿಗೆ ಮತ್ತೆ ತವರೂರು ಆಗುವ ವಿಶ್ವಾಸ ಮೂಡಿದೆ. ದಾವಣಗೆರೆಯಲ್ಲಿ ಮೂಲಸೌಲಭ್ಯಗಳು ನಿರ್ಮಾಣವಾಗಿವೆ. ಕಲೆ, ಸಂಗೀತ, ನಾಟಕದ ಮೇಲಿನ ಆಸಕ್ತಿ ಬೆಳೆಸುವ ಕೆಲಸ ಆಗಬೇಕಿದೆ. ಪೂರಕ ಕೆಲಸಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ವಿಧಾನಪರಿಷತ್‌ನ ಮಾಜಿ ಸದಸ್ಯ ಮೋಹನ್‌ಕುಮಾರ್ ಕೊಂಡಜ್ಜಿ, ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ವಿಶೇಷಾಧಿಕಾರಿ ರವಿಚಂದ್ರ, ರಾಜು ತಾಳಿಕೋಟೆ, ರಂಗಕರ್ಮಿಗಳಾದ ಚಿಂದೋಡಿ ಶ್ರೀಕಂಠೇಶ್, ರಾಜು ತಾಳಿಕೋಟೆ, ಶಶಿಧರ್  ಬಾರಿಘಾಟ್, ಮಹಾಂತೇಶ್ ಗಜೇಂದ್ರಗಡ ಇದ್ದರು.