ದಾವಣಗೆರೆ: ರಾಣೆಬೆನ್ನೂರಿನ ವಿನೀತ್ ಅವರ ಜರ್ಮನ್ ಶೆಪರ್ಡ್ ತಳಿಯ ಶ್ವಾನ, ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿತು.
ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್‌ನಿಂದ ಬಾಸ್ಕೆಟ್‌ಬಾಲ್ ಮೈದಾನದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧೆಡೆಯ 185 ಶ್ವಾನಗಳು ಭಾಗವಹಿಸಿದ್ದವು. ವಿಶಿಷ್ಟ ಪ್ರದರ್ಶನ ನೀಡಿದ ರಾಣೆಬೆನ್ನೂರಿನ ಜರ್ಮನ್ ಶೆಪರ್ಡ್ 25 ಸಾವಿರ ರೂ. ಬಹುಮಾನ ಹಾಗೂ ಪಾರಿತೋಷಕ ತನ್ನದಾಗಿಸಿಕೊಂಡಿತು.
ಚಿತ್ರದುರ್ಗದ ಸುಬ್ರಮಣ್ಯ ಅವರ ಡಾಬರ್‌ಮನ್ ತಳಿಯ ಶ್ವಾನ ದ್ವಿತೀಯ (15 ಸಾವಿರ ರೂ.), ಮುಧೋಳ್‌ನ ವಿಜಯಕುಮಾರ್ ಅವರ ಬೀಗಲ್ ಬ್ರೀಡ್ ಶ್ವಾನ ತೃತೀಯ (10 ಸಾವಿರ ರೂ.) ಸ್ಥಾನ ದಕ್ಕಿಸಿಕೊಂಡಿತು.
ಚತುರ್ಥ ಬಹುಮಾನ-ಭದ್ರಾವತಿಯ ಗುರುರಾಜ್ ಅವರ ಜರ್ಮನ್ ಶೆಪರ್ಡ್, ಪಂಚಮ ಬಹುಮಾನ- ಲಕ್ಷ್ಮೇಶ್ವರದ ನಿಖಿಲ್ ಅವರ ಲ್ಯಾಬ್ರಡಾರ್, ಆರನೇ ಬಹುಮಾನ- ಹರಿಹರದ ಗಂಗಾಧರ ಅವರ ರಾಟ್‌ವೀಲರ್, ಏಳನೇ ಬಹುಮಾನ- ಭದ್ರಾವತಿಯ ಪವನ್ ಅವರ ಬಾಕ್ಸರ್, 8ನೇ ಬಹುಮಾನವನ್ನು ಮಂಗಳೂರಿನ ಅನುಷಾ ಅವರ ವಿರಳ ತಳಿಯಲ್ಲೊಂದಾದ ಲಾಸಪ್ಸೋ ಶ್ವಾನ ಗಳಿಸಿತು.
ಪಪ್ಪಿ ವಿಭಾಗದಲ್ಲಿ ದಾವಣಗೆರೆಯ ಕೆ.ಎಸ್.ಪ್ರತಾಪ್ (ಲ್ಯಾಬ್ರಡಾರ್), ಆನವಟ್ಟಿಯ ಕೆ.ಬಿ. ಅರುಣ್ (ಬೀಗಲ್), ಭದ್ರಾವತಿ ವೇದಮೂರ್ತಿ ಅವರ ಜರ್ಮನ್ ಶೆಪರ್ಡ್ ಶ್ವಾನ ಕ್ರಮವಾಗಿ ಬಹುಮಾನ ಪಡೆದುಕೊಂಡವು.
ಭಾರತೀಯ ತಳಿಯ ವಯಸ್ಕರ ವಿಭಾಗದಲ್ಲಿ ಮುಧೋಳ್‌ನ ಯಂಕಪ್ಪ ಅವರ ಶ್ವಾನ, ಚಿಕ್ಕಮಗಳೂರಿನ ಆರ್.ಡಿ. ವೀರೇಶ್ ಬಾಬು ಅವರ ನಾಯಿ, ಕಿರಿಯರ ವಿಭಾಗದಲ್ಲಿ ಕ್ರಮವಾಗಿ ಬಹುಮಾನ ಪಡೆದವು. ದೇಸೀ ತಳಿ ವಿಭಾಗದಲ್ಲಿ ದಾವಣಗೆರೆ ಪ್ರಭಾವತಿ ಅವರ ಶ್ವಾನ ಬಹುಮಾನ ಗಳಿಸಿದರೆ, ಚಿತ್ರದುರ್ಗದ ವಿಶ್ವ, ದಾವಣಗೆರೆಯ ಅನನ್ಯಾ ಉತ್ತಮ ಹ್ಯಾಂಡ್ಲರ್ ಬಹುಮಾನ ಪಡೆದರು.
---