ದಾವಣಗೆರೆ: ಪಂಡಿತ ಪಂಚಾಕ್ಷರ ಗವಾಯಿ ಹಾಗೂ ಡಾ. ಪಂಡಿತ ಪುಟ್ಟರಾಜ ಕವಿಗಳು ನಾಡಿಗೆ ನೀಡಿದ ಸೇವೆ ಅನನ್ಯವಾದುದು. ಈರ್ವರನ್ನೂ ಜಗತ್ತು ಸೂರ್ಯ-ಚಂದ್ರರಂತೆ ನೋಡುತ್ತಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್ ಬಣ್ಣಿಸಿದರು.
ಬಾಡಾ ಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಲಿಂ. ಪಂ. ಪಂಚಾಕ್ಷರಿ ಗವಾಯಿಗಳ 81ನೇ ಹಾಗೂ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುಟ್ಟರಾಜರು ಅನಾಥ-ಅಂಧರು ಹಾಗೂ ದೀನ-ದಲಿತರ ಕುಬೇರ ಎಂಬುದಾಗಿ ಪಂಚಾಕ್ಷರ ಗವಾಯಿಗಳು ಬಣ್ಣಿಸಿದ್ದರು. ಇದನ್ನು ಮಾಧ್ಯಮಗಳು ಉತ್ತಮವಾಗಿ ಸಾದರಪಡಿಸಿದ್ದವು. ಇವರಿಬ್ಬರೂ ನೀಡಿದ್ದ ಸಾಹಿತ್ಯ, ಸಂಗೀತ ಸೇವೆ ಗುಪ್ತಗಾಮಿನಿಯಂತೆ ಹರಿಯುವ ನದಿಯಾಗಿ ಸಮುದ್ರವನ್ನು ಸೇರುತ್ತ ಇಡೀ ಜಗತ್ತಿನಲ್ಲಿ ವ್ಯಾಪಿಸಿದೆ ಎಂದರು.
ಪಂಚಾಕ್ಷರ ಕವಿ ಗವಾಯಿಗಳ ಚಿತ್ರ ನಿರ್ದೇಶನಕ್ಕೆ ಕೈ ಹಾಕುವ ಮುನ್ನ ಪುಟ್ಟರಾಜರನ್ನು ಕೇಳಿದೆ. ಸಿದ್ಧಿಪುರುಷರಾದ ಅವರು ಪಂಚಾಕ್ಷರ ಗವಾಯಿಗಳ ಮೂರ್ತಿ ಎದುರು ಎರಡು ಚೀಟಿ ಬರೆದು ಒಂದನ್ನು ಎತ್ತಿ ನೋಡು. ಅದರಲ್ಲಿ ಹೇಳಿದಂತೆ ಮಾಡು ಎಂದಿದ್ದರು. ಹಾಗೆ ಮಾಡಿದಾಗ ಚಿತ್ರ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿತು. ಚಿತ್ರದ ಪ್ರತಿ ಸನ್ನಿವೇಶವನ್ನು ಪುಟ್ಟರಾಜರಿಗೆ ವಿವರಿಸಿ ಚಿತ್ರಿಸಿದ್ದೆ. ಚಿತ್ರ ಯಶಸ್ಸೂ ಕಂಡಿತು ಎಂದು ನೆನಪಿಸಿಕೊಂಡರು.
ಈ ಸಿನಿಮಾ 30 ವರ್ಷಗಳ ನಂತರವೂ ಸಂಗೀತಪ್ರೇಮಿಗಳಲ್ಲಿ ಮನೆ ಮಾಡಿದೆ. ಇದಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಹಂಸಲೇಖಾ ‘ಈ ಚಿತ್ರದ ಮೂಲಕ ನನ್ನ ಪಾಪ ತೊಳೆದುಕೊಂಡೆ’ ಎಂದು ಹೇಳಿದ್ದರು. ಕನ್ನಡದಲ್ಲಿ ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರಿಗೆ ರಾಷ್ಟ್ರ್ಪ್ರಪ್ರಶಸ್ತಿ ಬಂದಿರಲಿಲ್ಲ. ‘ಉಮಂಡು ಗಮಂಡು’ ಹಾಡನ್ನು 8 ತಿಂಗಳ ಅಭ್ಯಾಸದ ಬಳಿಕ ಹಾಡಿದ್ದ ಎಸ್‌ಬಿಪಿ ಪ್ರಶಸ್ತಿಗೂ ಭಾಜನರಾದರು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಹುಟ್ಟುಹಾಕಿದ ಹಾನಗಲ್ ಕುಮಾರಸ್ವಾಮಿಗಳ ಚಿತ್ರ ನಿರ್ಮಿಸಲು ಕಥೆ ಸಿದ್ಧಪಡಿಸಿದೆ. ಆದರೆ ಸಾಧ್ಯವಾಗಲಿಲ್ಲ. ಈ ಬಗ್ಗೆ ನನಗೆ ನೋವಿದೆ. ಇದನ್ನು ಮುಂದುವರಿಸಲು ಮಹಾಸಭಾಕ್ಕೂ ಮನವಿ ಮಾಡಿದ್ದೆ ಎಂದೂ ಹೇಳಿದರು.
ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷ ಡಾ. ಅಥಣಿ ಎಸ್. ವೀರಣ್ಣ ಮಾತನಾಡಿ ದಾವಣಗೆರೆಯ ವೀರೇಶ್ವರ ಪುಣ್ಯಾಶ್ರಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕು. ಇದನ್ನು ರಾಜ್ಯ ಮಟ್ಟದಲ್ಲಿ ಸಂಗೀತ ಶಾಲೆ ಮಾಡಬೇಕೆಂಬ ಮಹದಾಸೆ ಇದೆ. ಸದ್ಯಕ್ಕೆ 48 ವಿದ್ಯಾರ್ಥಿಗಳಿದ್ದಾರೆ. ಇನ್ನೂ 50 ಮಂದಿ ಅಂಧರನ್ನು ಕರೆತಂದು ಸಂಗೀತ ಕಲಿಸುವ, ಅವರಿಗೆ ಊಟ ಒದಗಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಬೆಂಗಳೂರಿನ ಮಹಿಳಾ ದಾನಿಯೊಬ್ಬರು ಪುಣ್ಯಾಶ್ರಮಕ್ಕೆ 25 ಲಕ್ಷ ರೂ. ದೇಣಿಗೆ ಹಾಗೂ ಬೆಂಗಳೂರಿನ ಬನಶಂಕರಿಯಲ್ಲಿ ನಿವೇಶನವೊಂದನ್ನು ದಾನವಾಗಿ ನೀಡಿದ್ದಾಗಿ ಉಯಿಲು ಬರೆದಿದ್ದರು. ಕೋರ್ಟ್‌ನಲ್ಲಿ ಈ ವಿಚಾರದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆಶ್ರಮಕ್ಕೆ ನ್ಯಯ ಸಿಗುವ ವಿಶ್ವಾಸ ಇದೆ ಎಂದರು.
ವ್ಯಂಗ್ಯಚಿತ್ರಕಾರ ಎಚ್.ಬಿ.ಮಂಜುನಾಥ್ ಮಾತನಾಡಿ ಸನಾತನ ಧರ್ಮ ಪರಂಪರೆಯಲ್ಲಿ ಮಹತ್ವದ ಚಿಂತನೆಗಳಿವೆ. ಇದನ್ನು ಅರಿಯದೆ ಹಾಳು ಮಾಡಲು ಯತ್ನಿಸಿದವರು ಅದರ ಪರಿಣಾಮ ಅನುಭವಿಸುತ್ತಿದ್ದಾರೆ. ನಾಗರಿಕತೆಗಿಂತಲೂ ಗುಲಗಂಜಿಯಷ್ಟು ಸಂಸ್ಕೃತಿಗೆ ಬೆಲೆ ಕೊಟ್ಟಿದ್ದು ಭಾರತ ದೇಶ ಎಂದರು.
ಪಂಚಾಕ್ಷರ ಗವಾಯಿಗಳು ಅಂಧತ್ವ ಇದ್ದಾಗ್ಯೂ ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟರು. ಅವರ ಶಿಷ್ಯರಾಗಿ ಬಂದ ಪುಟ್ಟರಾಜರು ಸಂಗೀತಕ್ಕೆ ಸೀಮಿತವಾಗದೆ ಸಾಹಿತ್ಯ, ಸಮಾಜಸೇವೆಯಲ್ಲಿ ತೊಡಗಿದರು. ಮಹಾಕವಿಯಾಗಿದ್ದರು. ಸಂಸ್ಕೃತ, ಕನ್ನಡ, ಹಿಂದು ಬಹುಭಷಾ ಪಂಡಿತರಾಗಿದ್ದರು. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಅವರು ಕಾರಣರಾದರು ಎಂದರು.
ಆತ್ಮನಿವೇದನೆ ಹಾಗೂ ಭಗವಂತನ ಸಾಕ್ಷಾತ್ಕಾರಕ್ಕೆಂದೇ ಭಾರತೀಯ ಶಾಸ್ತ್ರೀಯ ಸಂಗೀತ ಜನ್ಮ ತಾಳಿದೆ. ಇದನ್ನು ಬೆಳೆಸಿದ್ದು ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಮೊಗ್ಗದ ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ.ಸಂಗಮೇಶ್ವರ ಗವಾಯಿಗಳು, ದೇವರಮನಿ ಶಿವಕುಮಾರ್, ಎಸ್.ಕೆ. ವೀರಣ್ಣ, ಎಸ್.ಜಿ. ಉಳವಯ್ಯ, ದೇವರಮನಿ ಶಿವರಾಜ್, ಮಂಜುನಾಥ ಕುರ್ಕಿ, ವೀರಭದ್ರಸ್ವಾಮಿ ಯರಗಲ್, ಸಿದ್ದೇಶ್, ರಮೇಶ್ ಧನ್ನೂರು, ಐಗೂರು ಚಂದ್ರಶೇಖರ್ ಇತರರಿದ್ದರು