ದಾವಣಗೆರೆ: ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ 31 ಮತ್ತು 32ನೇ ಕೊಠಡಿಯಲ್ಲಿನ ಸಂಸದರ ಜನಸಂಪರ್ಕ ಕಚೇರಿ ಭಾನುವಾರ ಚಾಲನೆಗೊಂಡಿದೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ವಿದ್ಯುಕ್ತ ಪೂಜಾ ವಿಧಾನಗಳನ್ನು ನೆರವೇರಿಸುವುದರೊಂದಿಗೆ ಕಚೇರಿಯನ್ನು ಉದ್ಘಾಟಿಸಿದರು.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನ ಜನಸಂಪರ್ಕ ಕಚೇರಿಯನ್ನು ಜನರ ಸಮಸ್ಯೆಗೆ ಸ್ಪಂದಿಸುವ ಉದ್ದೇಶದಿಂದ ಆರಂಭಿಸಲಾಗಿದ್ದು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಇಲ್ಲಿ ಪರಿಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈಗಾಗಲೇ ದಾವಣಗೆರೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಬಹು ವರ್ಷಗಳ ಕಾಲ ಬಗೆಹರಿಯದ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಭಾ ಅವರ ಮಕ್ಕಳಾದ ಸಮರ್ಥ, ಶ್ರೇಷ್ಠಾ, ತಾಯಿ ಗಿರಿಜಮ್ಮ, ಪ್ರಕಾಶ್, ಸುಮ ಪ್ರಕಾಶ್, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ನಂದಿಗಾವಿ ಶ್ರೀನಿವಾಸ್, ಕೆ.ಜಿ.ಶಿವಕುಮಾರ್, ಚಮನ್‌ಸಾಬ್, ಎಸ್. ಮಲ್ಲಿಕಾರ್ಜುನ್, ಸವಿತಾ ಹುಲ್ಮನಿ ಗಣೇಶ್, ಸುಧಾ ಇಟ್ಟಿಗುಡಿಮಂಜುನಾಥ್, ಮೀನಾಕ್ಷಿ ಜಗದೀಶ್ ಹಾಗೂ ಮುಖಂಡರು, ಕಾರ್ಯಕರ್ತರಿದ್ದರು.
---