ಜಿಲ್ಲೆ

ನೇಣಿಗೆ ಶರಣಾದ ಪಿಎಸ್‌ಐ ನಾಗರಾಜಪ್ಪ ಅಂತ್ಯಕ್ರಿಯೆ

ಡಿ. ಎಂ. ಮಹೇಶ್

ದಾವಣಗೆರೆ: ತುಮಕೂರಿನ ಲಾಡ್ಜೊಂದರಲ್ಲಿ ನೇಣಿಗೆ ಶರಣಾದ ಬಡಾವಣೆ ಠಾಣೆಯ ಪಿಎಸ್‌ಐ ಬಿ.ಆರ್.ನಾಗರಾಜಪ್ಪ (59) ಅವರ ಅಂತ್ಯಕ್ರಿಯೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದ ಸ್ಮಶಾನದಲ್ಲಿ ಭಾನುವಾರ ಸಂಜೆ ನೆರವೇರಿತು.

ಮೃತದೇಹವನ್ನು ದಾವಣಗೆರೆಗೆ ತಂದು ನಿಟುವಳ್ಳಿಯ ಪೊಲೀಸ್ ವಸತಿ ಗೃಹದಲ್ಲಿನ ಅವರ ನಿವಾಸದಲ್ಲಿ ಕೆಲಕಾಲ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು.

ಕಾಣೆಯಾಗಿದ್ದ ಅಧಿಕಾರಿ

ವಿಶೇಷ ಕರ್ತವ್ಯ ಮುಗಿಸಿ ಮಧ್ಯಪ್ರದೇಶದಿಂದ ಮರಳಿದ್ದ ಮರುದಿನವೇ ಕೌಟುಂಬಿಕ ಕಲಹದಿಂದಾಗಿ ನಾಪತ್ತೆಯಾಗಿದ್ದರು ಪಿಎಸ್‌ಐ ನಾಗರಾಜಪ್ಪ. ಜೂ. 30ಕ್ಕೆ ಮನೆಗೆ ಮರಳಿದ್ದ ಸಂದರ್ಭದಲ್ಲೇ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆದಿದ್ದರ ಹಿನ್ನೆಲೆಯಲ್ಲಿ ಬೇಸರಗೊಂಡು ಜು. 1ರ ನಸುಕಿನ ಜಾವ ಮನೆಯನ್ನು ತೊರೆದಿದ್ದರು.

ಕಳವು ಪ್ರಕರಣವೊಂದರಲ್ಲಿ ಮಧ್ಯಪ್ರದೇಶದಲ್ಲಿ ಸಿಕ್ಕಿಬಿದ್ದ ಆರೋಪಿಗಳು ದಾವಣಗೆರೆಯಲ್ಲಿ ಕೃತ್ಯ ಎಸಗಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ವಿಚಾರಣೆ ಬಳಿಕ ಬಡಾವಣೆ ಠಾಣೆ ಪೊಲೀಸರು, ಸ್ವತ್ತು ವಶಪಡಿಸಿಕೊಳ್ಳಲು ಎಸ್‌ಐ ನಾಗರಾಜಪ್ಪ ನೇತೃತ್ವದಲ್ಲಿ ಮಧ್ಯಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ಜಪ್ತು ಮಾಡಿ ಆಭರಣಗಳನ್ನು ದಾವಣಗೆರೆಗೆ ತರಲಾಗಿತ್ತು.

ನಸುಕಿನಜಾವ 2ರ ಹೊತ್ತಿಗೆ ಮನೆಯಿಂದ ಹೊರಗೆ ಹೋಗಿದ್ದ ಅವರು ವಾಪಸಾಗಿರಲಿಲ್ಲ. ಕಾಣೆಯಾದ ಪತಿಯನ್ನು ಹುಡುಕಿಕೊಡುವಂತೆ ಪತ್ನಿ ಕೆ.ಇ. ಲಲಿತಾ ಅವರು ಕೆಟಿಜೆ ನಗರ ಠಾಣೆಗೆ ಜು. 2ರಂದು ದೂರು ನೀಡಿದ್ದರು.

ವಿವಿಧ ಠಾಣೆಯಲ್ಲಿ ಸೇವೆ

ದಾವಣಗೆರೆ ತಾಲೂಕು ಜವಳಘಟ್ಟ ಗ್ರಾಮ ಮೂಲದವರಾದ ನಾಗರಾಜಪ್ಪ, 1993ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಕಾನ್‌ಸ್ಟೆಬಲ್ ಆಗಿ ಚಿತ್ರದುರ್ಗದಿಂದ ಕರ್ತವ್ಯ ಆರಂಭಿಸಿದ್ದರು. ದಾವಣಗೆರೆಯ ಸಂಚಾರ ಪೊಲೀಸ್ ಠಾಣೆ, ಬಸವನಗರ ಠಾಣೆಯಲ್ಲಿ ಕೆಲಸ ಮಾಡಿ ಎಎಸ್‌ಐ ಆಗಿ ಬಡ್ತಿ ಪಡೆದಿದ್ದರು. ಬಡಾವಣೆ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪತ್ನಿ ಲಲಿತಾ ಶಿಕ್ಷಕಿಯಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ನಿಟುವಳ್ಳಿಯ ಪೊಲೀಸ್ ವಸತಿ ಗೃಹದಲ್ಲಿ ನೆಲೆಸಿದ್ದರು. ಇಬ್ಬರು ಮಕ್ಕಳ ಪೈಕಿ ಪುತ್ರಿಯ ವಿವಾಹವಾಗಿದೆ. ಜವಳಘಟ್ಟದಲ್ಲಿ 1 ಎಕರೆ ಜಮೀನು ಇತ್ತು ಎನ್ನಲಾಗಿದೆ.

ನಿವೃತ್ತಿ ಅಂಚಿನಲ್ಲಿದ್ದರು..

ಪತಿಗೆ ಇನ್ನೊಂದು ವರ್ಷ ಸೇವೆ ಬಾಕಿ ಇತ್ತು. ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ರಕ್ತದೊತ್ತಡ, ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ವರ್ಷ ಮಗಳ ಮದುವೆಯಾಗಿತ್ತು, ಮುಂದಿನ ತಿಂಗಳಲ್ಲಿ ಮಗಳ ಹೆರಿಗೆಗೆ ವೈದ್ಯರು ದಿನಾಂಕ ಕೊಟ್ಟಿದ್ದರು ಎಂದು ಲಲಿತಾ ಹೇಳಿಕೊಂಡರು.

ಪತಿ, ಮಧ್ಯಪ್ರದೇಶದಿಂದ ಮರಳಿದ ದಿನ ರಾತ್ರಿ ಮನೆಯಲ್ಲಿ ಮಲಗಿದ್ದರು. ಬೆಳಗ್ಗೆ ಹೊತ್ತಿಗೆ ಇರಲಿಲ್ಲ. ಎಲ್ಲರೂ ಸೇರಿ ಹುಡುಕಾಟ ನಡೆಸಿದರೂ ಸಿಗದಿದ್ದಾಗ ದೂರು ನೀಡಿದೆವು. ಅವರು ಮೃತಪಟ್ಟಿರುವುದಾಗಿ ಇಂದು ಬೆಳಗ್ಗೆಯಷ್ಟೇ ಪೊಲೀಸರು ಮಾಹಿತಿ ನೀಡಿದರು ಎಂದು ಹೇಳಿ ಕಣ್ಣೀರಿಟ್ಟರು.

---