ದಾವಣಗೆರೆ: ಮುಡಾ ಪ್ರಕರಣದ ಪ್ರಾಸಿಕ್ಯೂಷನ್ ತಡೆಗಾಗಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪ್ರಾಸಿಕ್ಯೂಷನ್ ಹೆಸರಲ್ಲಿ ಕಾಂಗ್ರೆಸ್ ಶಕ್ತಿ ಕುಂದಿಸುವ, ಪಂಚ ಗ್ಯಾರಂಟಿ ಯೋಜನೆಗಳ ಸ್ಥಗಿತಕ್ಕಾಗಿ ಷಡ್ಯಂತ್ರವನ್ನು ಬಿಜೆಪಿ ನಡೆಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರಕೆ ದೂರಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಲೋಕಸಭಾ ಚುನಾವಣೆ ಫಲಿತಾಂಶ ಹಿನ್ನೆಲೆಯ ಸತ್ಯಶೋಧನಾ ಸಮಿತಿ ಸಭೆಯಲ್ಲಿ ಮಾತನಾಡಿ ಇದು ಇಲ್ಲಿಗೆ ನಿಲ್ಲದು. ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದು, ಅಲ್ಲಿ ನಮಗೆ ಜಯ ಸಿಗುವ ವಿಶ್ವಾಸವಿದೆ ಎಂದರು.
ಬಿಜೆಪಿಯವರು ನೂರು ಸುಳ್ಳನ್ನು ಹೇಳಿ ಸತ್ಯವಾಗಿಸಲು ಹೊರಟಿದ್ದಾರೆ. ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿ ಪರಿವರ್ತನೆ ಆಗುತ್ತಿದೆ. ಸರ್ಕಾರಕ್ಕೆ ಕಿರುಕುಳ ನೀಡುವುದೇ ಈ ಕಚೇರಿ ಕೆಲಸವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಷಡ್ಯಂತ್ರದಿಂದಾಗಿ ಸಿದ್ದರಾಮಯ್ಯ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಬಿಜೆಪಿಯ ಆರೋಪಿತ ಸಚಿವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಹುದಿತ್ತು. ತನಿಖಾಧಿಕಾರಿಯೇ ನೇಮಕವಾಗದೆ ತನಿಖೆಯೇ ನಡೆಯದೆ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿದ್ದಾದರೂ ಏಕೆ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮಾತ್ರವಲ್ಲದೆ ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ವಿರುದ್ಧವೂ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. 10 ವರ್ಷ 72 ರಾಷ್ಟ್ರಗಳಲ್ಲಿ ಸಂಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅಲ್ಲೆಲ್ಲ 52 ಬಾರಿ ಕಾಂಗ್ರೆಸ್ ಟೀಕಿಸಿದ್ದಾರೆ. ಆದರೆ, ವಾಸ್ತವ ಸ್ಥಿತಿಯನ್ನು ಬಿಂಬಿಸಿದ ರಾಹುಲ್‌ಗಾಂಧಿಯನ್ನು ಗುರಿ ಮಾಡಲಾಗುತ್ತಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.
ಸಹನೆ, ಸಹಬಾಳ್ವೆ, ಸತ್ಯ, ಶಾಂತಿ, ಅಹಿಂಸೆ ಹಿಂದು ಧರ್ಮದ ಧೋರಣೆಯಾಗಿವೆ. ಆದರೆ ಅಶಾಂತಿ, ಅಸತ್ಯ ಹಾಗೂ ಹಿಂಸೆ ಹಿಂದುತ್ವದ ಧೋರಣೆಯಾಗಿವೆ. ಬಿಜೆಪಿ ಎಲ್ಲೆಡೆ ಅಶಾಂತಿ ಸೃಷ್ಟಿಸುತ್ತಿದೆ. ರಾಮಮಂದಿರಕ್ಕಾಗಿ ಪ್ರದರ್ಶಿಸಿದ ಇಟ್ಟಿಗೆ ಚರಂಡಿಯಲ್ಲಿ ಸಿಕ್ಕರೆ, ಇಟ್ಟಿಗೆ ತೋರಿಸಿ ಬಿಜೆಪಿಯವರು ಸಂಗ್ರಹಿಸಿ ಹಣ ಎಲ್ಲಿ ಹೋಯಿತು ಎಂಬುದೇ ತಿಳಿಯದಾಗಿದೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಘೋರ್ಪಡೆ ಮಾತನಾಡಿ ಪಕ್ಷದ ಜಿಲ್ಲಾ ಸಮಿತಿ ಹಾಗೂ ಶಾಸಕರ ಹಂತದಲ್ಲಿ ಪಕ್ಷ ಬಲವರ್ಧನೆ ಆಗಬೇಕು. ಜಿಪಂ, ತಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ತರಲು ಶ್ರಮಿಸಬೇಕೆಂದರು.
ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಡಿಮೆ ಅಂತರದ ಗೆಲುವು ಸಾಧ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ 1 ಲಕ್ಷ ಮತಗಳ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಕಾರ್ಯಕ್ರಮಗಳ ಬಗ್ಗೆ ನಿರೀಕ್ಷಿತ ಪ್ರಚಾರ ಆಗದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಬೆಳಗ್ಗೆ ಒಂದೆಡೆ ಸಂಜೆ ಒಂದೆಡೆ ಗುರುತಿಸಿಕೊಂಡ ಪಕ್ಷದ ಕೆಲವರ ಕುತಂತ್ರದಿಂದಾಗಿ ಮತಗಳ ಅಂತರ ತಗ್ಗಿದೆ. ಅಂಥವರ ಪಟ್ಟಿ ನೀಡುತ್ತಿದ್ದು ಶಿಸ್ತುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಬಡವರ ಮಕ್ಕಳನ್ನು ಮುಂದಿಟ್ಟುಕೊಂಡು ಬಿಜೆಪಿ ಮುಖಂಡರು ಹಿಂದುತ್ವದ ಹೆಸರಲ್ಲಿ ಗಲಭೆ ಮಾಡುತ್ತಿದ್ದಾರೆ. ಹೆಣದ ಮೇಲೆ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ರಾಮಜ್ಯೋತಿ ಗಲಾಟೆಯ ಸಂತ್ರಸ್ತರಿಗೆ ನೆರವಾಗಿದ್ದು ಕಾಂಗ್ರೆಸ್ ಹೊರತಾಗಿ ಬಿಜೆಪಿ ಅಲ್ಲ. ಪೊಲೀಸರ ದಕ್ಷತೆಯಿಂದಾಗಿ ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಗಲಾಟೆ ನಿಯಂತ್ರಣಕ್ಕೆ ಬಂದಿತು ಎಂದರು.
ಪಕ್ಷದ ಮುಖಂಡರು ತಮ್ಮ ವಾರ್ಡ್‌ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಮತದಾರರನ್ನು ಸೆಳೆಯಬೇಕು. ನಾಮನಿರ್ದೇಶನ ಸದಸ್ಯ ಸ್ಥಾನಕ್ಕಾಗಿ ಶಿಫಾರಸು, ಓಲೈಕೆ ಮಾಡಬೇಡಿ ಎಂದರು.
ಸಭೆಯಲ್ಲಿ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಶಾಮನೂರು ಟಿ. ಬಸವರಾಜ್, ಅನಿತಾಬಾಯಿ ಮಾಲತೇಶ್,
ಜಿ.ಸಿ. ನಿಂಗಪ್ಪ, ಮಂಜುನಾಥ್, ಡೋಲಿ ಚಂದ್ರು, ಎಲ್.ಎಂ.ಎಚ್. ಸಾಗರ್, ದಾಕ್ಷಾಯಣಮ್ಮ, ಮಂಗಳಮ್ಮ, ಮಂಜಮ್ಮ ಇತರರಿದ್ದರು.
----