ಜಿಲ್ಲೆ

ಹೊಸ ಮನೆಗಳಿಗಿನ್ನು ಮಳೆನೀರು ಕೊಯ್ಲು   ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಗುಂಜನ್ ಕೃಷ್ಣ ಸೂಚನೆ

ಡಿ. ಎಂ. ಮಹೇಶ್

ದಾವಣಗೆರೆ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, ಮಳೆ ನೀರುಕೊಯ್ಲು ಮಾಡಿಕೊಳ್ಳುವ ಕಡ್ಡಾಯ ಷರತ್ತಿನೊಂದಿಗೆ ಹೊಸ ಮನೆಗಳ ನಿರ್ಮಾಣಕ್ಕೆ ಪರವಾನಗಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುವಂತಾಯಿತು. ಮಳೆ ನೀರು ಕೊಯ್ಲು ಸಾಮೂಹಿಕವಾಗಿ ಮಾಡುವಂತಾದರೆ ಬೇಸಿಗೆಯಲ್ಲಿ ಉಪಯೋಗಕ್ಕೆ ಬರಲಿದೆ ಎಂದು ಹೇಳಿದರು.
ಉದ್ಯೋಗಖಾತ್ರಿ ಯೋಜನೆಯಡಿ ಜಲಸಂರಕ್ಷಣೆಗಾಗಿ ರೈತರ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಚೆಕ್‌ಡ್ಯಾಂ, ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಮಳೆಗಾಲದಲ್ಲಿ ಹೆಚ್ಚು ನೀರು ನಿಲ್ಲುವಂತೆ, ಇಂಗುವಂತೆ ನೋಡಿಕೊಂಡಲ್ಲಿ ಬೇಸಿಗೆ ಎದುರಿಸಬಹುದು ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭವಾಗಿದ್ದು ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಸಿಗಬೇಕು. ಇದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಲಿದೆ. ಪೂರ್ವ ಮುಂಗಾರಿನಲ್ಲಿ ಕಡಿಮೆ ಅವಧಿಯಲ್ಲಿ ತರಕಾರಿ ಬೆಳೆಯಲು ಪ್ರೋತ್ಸಾಹಿಸಿ, ಜತೆಗೆ ದ್ವಿದಳ ಧಾನ್ಯ ಬೆಳೆಯಲು ಹೆಚ್ಚಿನ ಒತ್ತು ನೀಡಬೇಕೆಂದರು.
ಉದ್ಯೋಗ ಖಾತ್ರಿಯಡಿ ಹೂವು- ತರಕಾರಿ ಬೆಳೆಗಳಿಗೆ ಪೋತ್ಸಾಹ ನೀಡಲಾಗುತ್ತಿದ್ದು ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ದೀರ್ಘಕಾಲೀನ ಹಾಗೂ ವಿಶೇಷ ಹಣ್ಣು, ತರಕಾರಿಗಳ ಬೆಳೆಗೆ ಗಮನ ನೀಡಬೇಕೆಂದರು.
ಸಾವಯವ ತರಕಾರಿ ಬೆಳೆಗೆ ಪ್ರೋತ್ಸಾಹಿಸಿ; ಜನರು ಆರೋಗ್ಯ ದೃಷ್ಟಿಯಿಂದ ಸಾವಯವ ಹಣ್ಣು, ತರಕಾರಿ, ಸೊಪ್ಪುಗಳನ್ನು ಬಳಸಲು ಇಷ್ಟಡುತ್ತಾರೆ. ಅದಕ್ಕಾಗಿ ಸಾವಯವ ಆಧಾರಿತ ತೋಟಗಾರಿಕೆ, ಕೃಷಿಗೆ ಒತ್ತು ನೀಡಬೇಕು. ಸಾವಯವ ಹಣ್ಣು, ತರಕಾರಿಗಳಿಗೆ ಗುಣಮಟ್ಟದ ದೃಢೀಕರಣದೊಂದಿಗೆ ಪ್ರಮಾಣೀಕರಿಸಿ ಮಾರುಕಟ್ಟೆ ಕಲ್ಪಿಸಿದಲ್ಲಿ ಬೇಡಿಕೆ ಇದೆ. ರೈತರು ಇದರಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂದು  ತೋಟಗಾರಿಕೆ, ಕೃಷಿ ಅಧಿಕಾರಿಗಳಿಗೆ ತಿಳಿಸಿದರು.
 ಜಲಾನಯನ ಕಾಮಗಾರಿಗೆ ಒತ್ತು; ಉದ್ಯೋಗ ಖಾತ್ರಿ ಯೋಜನೆಯಡಿ ಜಲಸಂರಕ್ಷಣೆಗಾಗಿ ರೈತರ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಚೆಕ್‌ಡ್ಯಾಂ, ಇಂಗುಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಮಳೆಗಾಲದಲ್ಲಿ ಹೆಚ್ಚು ನೀರು ನಿಲ್ಲುವಂತೆ, ಇಂಗುವಂತೆ ನೋಡಿಕೊಂಡಲ್ಲಿ ಬೇಸಿಗೆ ಎದುರಿಸಬಹುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಉಪಚಾರವಾಗದ 60 ಸಾವಿರ ಹೆಕ್ಟೇರ್ ಜಮೀನಿದೆ. ಈಗಾಗಲೇ 1.80 ಲಕ್ಷ ಹೆಕ್ಟೇರ್ ಉಪಚಾರವಾದ ಜಲಾನಯನ ಪ್ರದೇಶವಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಇಂತಹ ಪ್ರದೇಶದಲ್ಲಿ ಈ ವರ್ಷ ಜಲಸಂರಕ್ಷಣಾ ಕಾಮಗಾರಿ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸೂಚಿಸಿದರು.  
ಕಳೆದ ಬೇಸಿಗೆಯಲ್ಲಿ ಕೊಳವೆಬಾವಿಗಳು ವಿಫಲವಾಗಿ ಖಾಸಗಿ ಬೋರ್‌ವೆಲ್ ಮತ್ತು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಿದ ಗ್ರಾಮಗಳಲ್ಲಿ ಆದ್ಯತೆಯೊಂದಿಗೆ ಹೊಸ ಕುಡಿವ ನೀರಿನ ಪೂರೈಕೆ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕೆಂದೂ ತಿಳಿಸಿದರು.
ನರಾಗಾದಡಿ 35 ಲಕ್ಷ ಮಾನವ ದಿನಗಳ ಗುರಿ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಡಿ ಪ್ರಸಕ್ತ ವರ್ಷ 215.80 ಕೋಟಿ ರೂ.ಗಳ ಕಾರ್ಮಿಕ ಆಯವ್ಯಯ ಅಂದಾಜಿಸಲಾಗಿದ್ದು 35 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ 6.13 ಲಕ್ಷ ಮಾನವ ದಿನಗಳ ಸೃಜನೆಯಾಗಿ 20.11 ಕೋಟಿ ರೂ.ಕೂಲಿ ಬಾಬ್ತು, 10.35 ಕೋಟಿ ರೂ.ಗಳನ್ನು ಸಾಮಗ್ರಿ ಬಾಬ್ತಿಗೆ ವ್ಯಯಿಸಲಾಗಿದೆ ಎಂದು ಜಿಪಂ ಸಿಇಒ ತಿಳಿಸಿದರು.  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಜಲ ಪೂರೈಕೆಗೂ ಮುನ್ನ ಪರೀಕ್ಷೆಗೆ ತಾಕೀತು
ರಾಜ್ಯದ ಕೆಲವೆಡೆ ಕಲುಷಿತ ಕುಡಿವ ನೀರಿನ ಪೂರೈಕೆಯಿಂದ ಸಾಮೂಹಿಕವಾಗಿ ಅನಾರೋಗ್ಯದ ವರದಿಯಾಗುತ್ತಿದೆ. ಹೀಗಾಗಿ ಕುಡಿವ ನೀರು ಪೂರೈಕೆಗೂ ಮುನ್ನ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕು. ನೀರಿನ ಮೂಲ, ಪೈಪ್‌ಲೈನ್, ಟ್ಯಾಂಕ್ಗಳಲ್ಲಿ ನೀರನ್ನು ಕಾಲಕಾಲಕ್ಕೆ ಪರೀಕ್ಷೆ ಮಾಡಿದ ನಂತರವೇ ಪೂರೈಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.
ಶುಚಿ ನೀರೊದಗಿಸುವುದು ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಯಾ ಸಂಸ್ಥೆಗಳ ಮುಖ್ಯಸ್ಥರ ಜವಾಬ್ದಾರಿಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಿರಿಯ ಇಂಜಿನಿಯರ್‌ಗಳು ನೀರಿನ ಪರೀಕ್ಷೆ ನಡೆಸಿ ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಸ್ಥಳೀಯ ಅಧಿಕಾರಿಗನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕುಡಿವ ನೀರಿನ ಪೈಪ್‌ಲೈನ್, ಚರಂಡಿ ದಾಟಿ ಹೋಗುವಂತಿದ್ದಲ್ಲಿ ಪರಿಶೀಲಿಸಿ, ಬೇರೆಡೆ ಸ್ಥಳಾಂತರಿಸಿ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಚರಂಡಿಯೊಂದಿಗೆ ಕುಡಿಯುವ ನೀರಿನ ಪೈಪ್‌ಲೈನ್ ಇರಬಾರದು ಎಂದು ತಿಳಿಸಿದರು.
ಕುಡಿವ ನೀರು ಯೋಗ್ಯವಲ್ಲ ಎಂದು ಪರೀಕ್ಷಾ ವರದಿಯಿಂದ ದೃಢಪಟ್ಟ ಕಡೆಗಳಲ್ಲಿ ಜನರು ಶುದ್ಧ್ದ ಕುಡಿವ ನೀರಿನ ಘಟಕದಿಂದ ಪಡೆದ ನೀರನ್ನೇ ಕುಡಿಯಲು ಜಾಗೃತಿ ಮೂಡಿಸಬೇಕೆಂದು ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.
ಜಿಲ್ಲೆಯಲ್ಲಿ 799 ಶುದ್ಧ ನೀರಿನ ಘಟಕಗಳಿದ್ದು, 761 ಕಾರ್ಯ ನಿರ್ವಹಿಸುತ್ತಿವೆ. 34 ಘಟಕಗಳಿಗೆ ನೀರು ಪೂರೈಸದ್ದರಿಂದ ಹಾಗೂ ನಾಲ್ಕು ಇತರೆ ಕಾರಣದಿಂದ ಸ್ಥಗಿತವಾಗಿವೆ ಎಂದು ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.
--