ಜಿಲ್ಲೆ

ಏತ ನೀರಾವರಿಯಡಿ ಪ್ರಾಯೋಗಿಕ ನೀರು ಹರಿವು  ಜಗಳೂರಿನ 47 ಕೆರೆ ತುಂಬಿಸುವ ಯೋಜನೆ

ಡಿ. ಎಂ. ಮಹೇಶ್

ದಾವಣಗೆರೆ: ತುಂಗಭದ್ರಾ ನದಿಯಿಂದ ಜಗಳೂರು ತಾಲೂಕಿನ 47, ಹರಪನಹಳ್ಳಿ ತಾಲೂಕಿನ 6 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದ್ದು ಮುಂಗಾರಿನಲ್ಲಿ 30 ಕೆರೆಗಳಿಗೆ ನೀರು ತುಂಬಿಸಲು ಪ್ರಾಯೋಗಿಕ ಹರಿವು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ತುಂಗಭದ್ರಾ ನದಿಗೆ ದೀಟೂರು ಬಳಿ ನಿರ್ಮಿಸಿರುವ ಪಂಪ್ ಹೌಸ್ ಮತ್ತು ಜಗಳೂರು ತಾಲೂಕಿನ ತುಪ್ಪದಹಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಗುರುವಾರ ವೀಕ್ಷಣೆ ಮಾಡಿ ಮಾತನಾಡಿದರು.
660.34 ಕೋಟಿ ರೂ. ವೆಚ್ಚದಲ್ಲಿ ಜಗಳೂರು ತಾಲೂಕಿನ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಯನ್ನು 2019 ರ ಡಿಸೆಂಬರ್ 9 ರಿಂದ ಆರಂಭಿಸಲಾಗಿದೆ. ಇದರಡಿ 1.379 ಟಿಎಂಸಿ ನೀರನ್ನು ಮಳೆಗಾಲದಲ್ಲಿ ಬಳಸಿ ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಹೇಳಿದರು.
ಈ ಯೋಜನೆಯಿಂದ 65 ಗ್ರಾಮಗಳಿಗೆ ಅನುಕೂಲವಾಗಲಿದ್ದು 1 ಲಕ್ಷ ರೈತರಿಗಿಂತ ಹೆಚ್ಚು ಜನರಿಗೆ ಉಪಯೋಗವಾಗುವ ಜತೆಗೆ ತಾಲೂಕಿನ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಯೋಜನೆಯಡಿ  ಮುಖ್ಯ ಪೈಪ್‌ಲೈನ್ ಉದ್ದವು 220.68 ಕಿ.ಮೀ ಇದ್ದು, ಎಂ.ಎಸ್ ಪೈಪ್ 142.62 ಕಿ.ಮೀ ಇದ್ದು  ಇದುವರೆಗೆ 115 ಕಿ.ಮೀ ಅಳವಡಿಸಲಾಗಿದೆ. ಜಾಕ್‌ವೆಲ್ ಮತ್ತು ಪಂಪ್‌ಹೌಸ್ ಕಾಮಗಾರಿ ಮುಗಿದಿರುವುದರಿಂದ ಈಗಾಗಲೇ ನೀರೆತ್ತುವ ಪ್ರಾಯೋಗಿಕ ಕಾರ್ಯ ಆರಂಭಿಸಲಾಗಿದ್ದು ಪ್ರಸಕ್ತ ಮುಂಗಾರಿನಲ್ಲಿ 30 ಕೆರೆಗಳಿಗೆ ನೀರು ಪಂಪ್ ಮಾಡಿ ಭರ್ತಿ ಮಾಡಲಾಗುತ್ತದೆ ಎಂದರು.
ವೀಕ್ಷಣೆ ವೇಳೆ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳಿದ್ದರು.