ಜಿಲ್ಲೆ

ಇಂದಿನಿಂದ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಪವರ್ ಲಿಫ್ಟಿಂಗ್ ಪಂದ್ಯಾವಳಿ

ಡಿ. ಎಂ. ಮಹೇಶ್

ದಾವಣಗೆರೆ: ಪ್ಯಾನ್ ಇಂಡಿಯಾ ಗೇಮ್ಸ್ ಫೆಡರೇಷನ್ ವತಿಯಿಂದ ನಗರದ ಇಂಜಿನಿಯರಿಂಗ್ ಅಸೋಸಿಯೇಷನ್ ಸಭಾಂಗಣದಲ್ಲಿ ಸೆ. 28, 29ರಂದು ರಾಷ್ಟ್ರೀಯ ಮಾಸ್ಟರ್ಸ್‌ ವೇಟ್ ಲಿಫ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆಯಲಿವೆ.
ಬೆಂಗಳೂರು, ಧಾರವಾಡ ನಂತರದಲ್ಲಿ ದಾವಣಗೆರೆಯಲ್ಲಿ ಮೂರನೇ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ಆಯೋಜನೆಯಾಗಿದ್ದು, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿ ವಿವಿಧೆಡೆಗಳಿಂದ ಸುಮಾರು 160ಕ್ಕೂ ಹೆಚ್ಚು ಕ್ರೀಡಾಳುಗಳು ಭಾಗವಹಿಸುವರು ಎಂದು ಅಂತಾರಾಷ್ಟ್ರೀಯ ವೇಟ್ ಲಿಫ್ಟರ್ ಕೆ.ಎಸ್.ಸಾಯಿನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ. 28ರಂದು ವೇಟ್ ಲಿಫ್ಟಿಂಗ್, ಮರುದಿನ ಪವರ್ ಲಿಫ್ಟಿಂಗ್ ಸ್ಪರ್ಧೆಗಳು ನಡೆಯಲಿವೆ. 30ರಿಂದ 75 ವರ್ಷದವರಿಗೆ 52ರಿಂದ 103 ಕೆಜಿ ದೇಹತೂಕ ಆಧರಿಸಿ ಪಂದ್ಯಾವಳಿ ನಡೆಯಲಿವೆ. ವಿಜೇತರಿಗೆ ಬಂಗಾರ ಲೇಪಿತ ಪದಕಗಳ ಜತೆಗೆ ಪ್ರಶಸ್ತಿಪತ್ರ, ಟಿ-ಶರ್ಟ್, ಟೋಪಿ ನೀಡಲಾಗುವುದು.
ಎರಡೂ ಪಂದ್ಯಾವಳಿಯಲ್ಲಿ ವೈಯಕ್ತಿಕವಾಗಿ ಭಾರತದ ಬಲಿಷ್ಠ ಪುರುಷ/ ಬಲಿಷ್ಠ ಮಹಿಳೆ ಹಾಗೂ ಶ್ರೇಷ್ಠ ಲಿಫ್ಟರ್ ಪುರುಷ/ ಮಹಿಳೆ ವೈಯಕ್ತಿಕ ಪ್ರಶಸ್ತಿ ನೀಡಲಾಗುವುದು.
ಸೆ. 28ರಂದು ಬೆಳಗ್ಗೆ 10 ಗಂಟೆಗೆ ಪಂದ್ಯಾವಳಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್, ಬಿಜೆಪಿ ಮುಖಂಡ ಶ್ಯಾಮ್, ಪ್ಯಾನ್ ಇಂಡಿಯಾ ಗೇಮ್ಸ್ ಫೆಡರೇಷನ್ ಕಾರ್ಯದರ್ಶಿ ನಟರಾಜ್, ಪಾಲಿಕೆ ಸದಸ್ಯ ವೀರೇಶ್ ಪೈಲ್ವಾನ್, ಮಹೇಶ್, ಮುಖಂಡ ಷಣ್ಮುಖಾಚಾರ್ ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸವರಾಜ್, ಷಣ್ಮುಖಾಚಾರ್, ಜಿ. ಪಕೃದ್ದೀನ್, ರಾಜು, ಮಂಜುನಾಥ, ವಿರೂಪಾಕ್ಷಪ್ಪ ಇದ್ದರು.