ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮುಖಂಡ ಜಿ.ಬಿ.ವಿನಯಕುಮಾರ್ ಅವರೊಂದಿಗೆ ಕಾಂಗ್ರೆಸ್‌ನ ಮಾಜಿ ಸಚಿವ ಎಚ್.ಎಂ.ರೇವಣ್ಣ ನೇತೃತ್ವದ ನಿಯೋಗ ಭಾನುವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿತು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವಿದೆ. ಕಣದಿಂದ ಹಿಂದೆ ಸರಿದು ಪಕ್ಷಕ್ಕೆ ಬೆಂಬಲಿಸಿ ಎಂದು ರೇವಣ್ಣ ಅವರ ತಂಡ ಮನವೊಲಿಸಲು ಯತ್ನಿಸಿತಾದರೂ ಸಫಲವಾಗಲಿಲ್ಲ.
ಪಕ್ಷೇತರ ಸ್ಪರ್ಧೆ ಮಾಡುವಂತೆ ಪ್ರವಾಸ ಮಾಡಿದ ಹಳ್ಳಿಗಳಲ್ಲೆಲ್ಲ ಒತ್ತಡ ಬಂದಿದ್ದರಿಂದ ಕಣಕ್ಕಿಳಿದಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರೂ ಸ್ಪರ್ಧಿಸದಂತೆ ಹೇಳಿದ್ದರಾದರೂ ಜನರ ಅಭಿಪ್ರಾಯದಂತೆ ನಾನು ನಡೆದಿದ್ದೇನೆ. ಕಣದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ವಿನಯಕುಮಾರ್ ಸ್ಪಷ್ಟನೆ ನೀಡಿದ್ದಾರೆ.
30 ವರ್ಷಗಳಿಂದ ಜಿಲ್ಲೆಯ ಎರಡು ಪಕ್ಷದಲ್ಲಿ ಎರಡು ಕುಟುಂಬಗಳದ್ದೇ ಪಾಳೇಗಾರಿಕೆ ಸಂಸ್ಕೃತಿ ಇದೆ. ಜನರು ಇದರ ವಿರುದ್ಧ ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ವರ್ಗದವರು ನನಗೆ ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು.
ಎಂಎಲ್ಸಿ ಅಬ್ದುಲ್ ಜಬ್ಬಾರ್, ಎಂ.ಟಿ.ಸುಭಾಶ್ಚಂದ್ರ, ಬಿ. ವೀರಣ್ಣ, ಹೊನ್ನಾಳಿ ಯೋಗೇಶ್ ಇತರ ಮುಖಂಡರಿದ್ದರು. ಸಂಧಾನ ಸಭೆ ವಿಫಲವಾದ್ದರಿಂದ ರೇವಣ್ಣ ತಂಡ ಬರಿಗೈಲಿ ವಾಪಸಾಯಿತು.
---