ಜಿಲ್ಲೆ

ಎಲ್ಲರಿಗೂ ಶೈಕ್ಷಣಿಕ, ರಾಜಕೀಯ ಪ್ರಜ್ಞೆ ಅನಿವಾರ್ಯ   ವಿನಯ್‌ಕುಮಾರ್ ಅನಿಸಿಕೆ   ಪೆರಿಯಾರ್ ರಾಮಸ್ವಾಮಿ ನಾಯಕರ ಜನ್ಮದಿನೋತ್ಸವ

ಡಿ. ಎಂ. ಮಹೇಶ್

ದಾವಣಗೆರೆ: ಶಿಕ್ಷಣದಲ್ಲಿ ಬದಲಾವಣೆಯಾಗದ ಹೊರತು ಯಾವ ಹೋರಾಟವೂ ಯಶಸ್ವಿಯಾಗದು. ಎಲ್ಲರಲ್ಲೂ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಪ್ರಜ್ಞೆ ಬೆಳೆದಾಗ ಸಮಾಜದಲ್ಲಿ ಸುಧಾರಣೆ ಸಾಧ್ಯ ಎಂದು ಇನ್‌ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ಜಿ. ಬಿ. ವಿನಯ್‌ಕುಮಾರ್ ಹೇಳಿದರು.
ಪೆರಿಯಾರ್ ರಾಮಸ್ವಾಮಿ ನಾಯಕರ ವಿಚಾರ ವೇದಿಕೆಯಿಂದ ನಗರದ ರೋಟರಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದ್ರಾವಿಡ ಜನಾಂಗದ ಸ್ವಾಭಿಮಾನದ ಸಂಕೇತ ಪೆರಿಯಾರ್ ರಾಮಸ್ವಾಮಿ ನಾಯಕರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಅಲ್ಪತೃಪ್ತರು. ಸ್ಥಾನಮಾನ ಉಳಿಸಿಕೊಳ್ಳಲು ಕೆಲವರು ಹೆಣಗಾಡುತ್ತ, ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಾರೆ. ಅಸಮಾನತೆ ಆಳವಾಗಿ ಬೇರೂರಿದೆ. ಶೈಕ್ಷಣಿಕ ಅಸಮಾನತೆ ಹೋಗದ ಹೊರತು ಸಂಪನ್ಮೂಲ ಶಕ್ತಿ ಬರುವುದಿಲ್ಲ. ಹೋರಾಟವೇ ಶಿಕ್ಷಣವೇ ಅಸ್ತ್ರ ಎಂದರು.
ನಾನು ಕ್ಷೇತ್ರದಲ್ಲಿ 650 ಕಿ.ಮೀ. ಪಾದಯಾತ್ರೆ ಮಾಡಿದಾಗ ಹಳ್ಳಿಗಳ ಸರ್ಕಾರಿ ಶಾಲೆಗಳ ಸ್ಥಿತಿ ಗಮನಿಸಿದ್ದೇನೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗದಂತೆ ಮಾಡಲಾಗಿದೆ. ಹಳ್ಳಿಯ ಶಾಲೆಗಳಲ್ಲಿ ಅವಕಾಶ ಕಡಿಮೆ ಆಗಿದೆ. ಖಾಸಗಿ ಶಾಲೆಗಳು ಬಂದರೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬರುತ್ತಿವೆ ಎಂದು ಹೇಳಿದರು.
ಇಂದು ಎಸ್ಸಿ-ಎಸ್ಟಿ ಸೇರಿದಂತೆ ಶೋಷಿತ ಸಮುದಾಯಗಳಿಗೆ ರಾಜಕಾರಣದಲ್ಲಿ ಅವಕಾಶ ಸಿಗದ ವಾತಾವರಣ ನಿರ್ಮಾಣವಾಗಿದೆ. ಪ್ರತಿಭೆ, ಜ್ಞಾನ. ನಿಭಾಯಿಸುವ ಸಾಮರ್ಥ್ಯ ಇದ್ದರೂ ಬೆಳೆಯದಂತೆ ಕಾಣದ ಕೈಗಳು ಅಡ್ಡಿಪಡಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲಾ ಜಾತಿ-ಧರ್ಮೀಯರು ಒಗ್ಗೂಡಿ ಹೋರಾಟ ಮಾಡಿದಾಗ ಸಮಾಜದ ಪ್ರಗತಿ ಸಾಧ್ಯ. ಜಾತಿವಾರು ಪ್ರತಿಭಾ ಪುರಸ್ಕಾರ ನಡೆಯುತ್ತಿದೆ. ಜಾತಿ ವ್ಯವಸ್ಥೆ ರಾಜಕಾರಣದಲ್ಲಿ ಕೆಟ್ಟ ಪರಿಣಾಮ ಬೀರಿದೆ. ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರನ್ನು ಸಿಎಂ ಕುರ್ಚಿಯಿಂದ ಇಳಿಸುವ ಪಿತೂರಿ ನಡೆಯುತ್ತಿದೆ. ಎಲ್ಲ ಪಕ್ಷದಲ್ಲೂ ಅಹಿಂದ, ಶೋಷಿತರು ಬೆಳೆಯದಂತೆ ತಡೆಯಲಾಗುತ್ತಿದೆ. ಹೀಗಾಗಿ ಮೊದಲು ರಾಜಕೀಯ ಪ್ರಜ್ಞೆ ಮೂಡಬೇಕು ಎಂದು ಹೇಳಿದರು.
ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಸಮಾನ ಮನಸ್ಕರು ಒಂದಾಗಬೇಕು. ಸಂವಾದ, ಚರ್ಚಾ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು ಹೆಚ್ಚಬೇಕು ಎಂದು ಆಶಿಸಿದರು.
ಮಾನವ ಬಂಧುತ್ವ ವೇದಿಕೆಯ ಕಾರ್ಯದರ್ಶಿ ಪ್ರೊ. ಎ.ಬಿ. ರಾಮಚಂದ್ರಪ್ಪ ಮಾತನಾಡಿ ಸ್ಥಾಪಿತ ವ್ಯವಸ್ಥೆ ನಾಶಪಡಿಸಿ ಹೊಸ ವ್ಯವಸ್ಥೆ ಕಟ್ಟಬೇಕು. ಬುದ್ಧ, ಬಸವಣ್ಣ, ಕನಕ, ಅಂಬೇಡ್ಕರ್, ಪೆರಿಯಾರ್ ಈ ಕೆಲಸ ಮಾಡಿದರು. ಪೆರಿಯಾರ್, ವೈದಿಕ ಪರಂಪರೆ ವಿರುದ್ಧ ಹೋರಾಡಿ ಪರಿವರ್ತನೆಯ ಕನಸು ಕಂಡಿದ್ದರು. ಇಂದಿನ ಪರಿಸ್ಥಿತಿಯಲ್ಲಿ ಇದು ಸುಲಭವಲ್ಲ ಎಂದು ತಿಳಿಸಿದರು.
ವೇದಿಕೆಯಲ್ಲಿ ವಕೀಲ ಅನೀಸ್ ಪಾಷಾ, ಹನುಮಂತಪ್ಪ ತುಪ್ಪದಹಳ್ಳಿ, ಡಿ. ತಿಪ್ಪಣ್ಣ ಕತ್ತಲಗೆರೆ, ಎಚ್.ಸಿ. ಗುಡ್ಡಪ್ಪ, ರಂಗನಾಥ ಸಿರಿಗೆರೆ, ಸಿದ್ದರಾಮಪ್ಪ ಬುಳಸಾಗರ, ರಂಗನಾಥ್ ಎಸ್. ಹಾಲುವರ್ತಿ, ಬಿ. ಎಂ. ಬಸವರಾಜಪ್ಪ, ಆರ್. ಬಿ. ರವಿಕುಮಾರ್ ಇತರರಿದ್ದರು.