ಜಿಲ್ಲೆ

ಇ-ಸ್ವತ್ತು ಆಂದೋಲನ ಪಿಡಿಒಗಳಿಗೆ ಜನವರಿ ಅಂತ್ಯದ ಗಡುವು

ಡಿ. ಎಂ. ಮಹೇಶ್

ದಾವಣಗೆರೆ: ಜಿಲ್ಲೆಯ ಗ್ರಾಪಂ ವ್ಯಾಪ್ತಿಗಳಲ್ಲಿ ಮನೆ ಮನೆಗೆ ಇ-ಸ್ವತ್ತು ಆಂದೋಲನ ಕೈಗೊಂಡು, ಜನವರಿ ಅಂತ್ಯದೊಳಗಾಗಿ ವಿತರಣೆ ಪೂರ್ಣಗೊಳಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪಿಡಿಒಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ದಿಶಾಂಕ್ ಆ್ಯಪ್ ಮೂಲಕ ಪಿಡಿಒಗಳೇ ಸ್ಥಳ ಪರಿಶೀಲಿಸಿ, ಅಗತ್ಯವಿದ್ದವರಿಗೆ ಇ- ಸ್ವತ್ತು ಪತ್ರವನ್ನು 300 ರೂ. ವೆಚ್ಚದಲ್ಲಿ ಸರಳವಾಗಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ಕೆಲವರ ದುರಾಸೆಯಿಂದಾಗಿ, ಆಸ್ತಿ ಹಂಚಿಕೆಯಲ್ಲಿ ಕುಟುಂಬಸ್ಥರೇ ವಂಚನೆಗೆ ಒಳಗಾದ ಸಂದರ್ಭಗಳಿವೆ. ಕೋರ್ಟ್ ಶುಲ್ಕ ಭರಿಸಲಾಗದ ಅಮಾಯಕರೂ ಕೆಲವರಿದ್ದಾರೆ. ಹೀಗಾಗಿ ಮನೆ ಮನೆಗೆ ಹೋಗಿ ಇ- ಸ್ವತ್ತು ವಿತರಣೆಯಂತಹ ಕ್ರಾಂತಿಕಾರಿ ಹೆಜ್ಜೆ ಇಡಬೇಕು ಎಂದು ಸಂಸದರು ಸೂಚಿಸಿದರು.
ಬಫರ್‌ಜೋನ್‌ನಂತಹ ವಿವಾದಿತ ಜಾಗ ಹೊರತಾಗಿಸಿ ವಿವಿಧೆಡೆ ಇ ಸ್ವತ್ತು ನೀಡಬಹುದು. ಅಲ್ಲದೆ ಅಗತ್ಯವಿದ್ದಲ್ಲಿ ಪಂಚಾಯಿತಿ ಮಟ್ಟದಲ್ಲೂ ಪೌತಿ ಖಾತೆ ಆಂದೋಲನವನ್ನೂ ಹಮ್ಮಿಕೊಂಡು ಇತ್ಯರ್ಥಪಡಿಸಬೇಕು ಎಂದು ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಹೇಳಿದರು.
ದಿಶಾಂಕ್ ಆ್ಯಪ್‌ನಲ್ಲಿ ಈ ಹಿಂದೆ ಗುರುತಿಸಿದ ಗ್ರಾಮದ ಗಡಿ ಒಳಪಡಲಿದೆ. 1965ರಲ್ಲಿ ಪ್ರತಿ ಗ್ರಾಮದ ಗಡಿಯ ನಕ್ಷೆ ತಯಾರಿಸಲಾಗಿತ್ತು. 30 ವರ್ಷಕ್ಕೊಮ್ಮೆ ಇದನ್ನು ಮಾರ್ಪಡಿಸಬೇಕು. ಆದರೆ ಇದುವರೆಗೆ ನಕ್ಷೆ ಬದಲಾವಣೆ ಆಗಿಲ್ಲ. ಅದಾದಲ್ಲಿ ದಿಶಾಂಕ್ ಆ್ಯಪ್ ವ್ಯಾಪ್ತಿಗೆ ಒಳಪಡಲಿದ್ದು ಪಿಡಿಒಗಳು ಇ- ಸ್ವತ್ತು ನೀಡಲು ಅನುಕೂಲವಾಗಲಿದೆ ಎಂದು ಸಿಇಒ ಹೇಳಿದರು.
ಮಹಿಳಾ ಆರ್ಥಿಕ ಸ್ವಾವಲಂಬನೆಯಾಗಲಿ
ಜಿಲ್ಲೆಯಲ್ಲಿ ಕೆಲವು ಗ್ರಾಪಂಗಳು ತೆರಿಗೆ ವಸೂಲಾತಿಯಲ್ಲಿ ಗಮನೀಯ ಸಾಧನೆ ಮಾಡಿವೆ. ಇದರ ಜತೆಯಲ್ಲೇ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಕಾರ್ಯಕ್ರಮಗಳನ್ನು ರೂಪಿಸುವ ದೃಷ್ಟಿಕೋನ ಪಿಡಿಒಗಳಲ್ಲಿ ಇರಲಿ  ಎಂದೂ ಸಂಸದರು ಸಲಹೆ ನೀಡಿದರು.
ಪ್ರತಿ 3ರಿಂದ 6 ತಿಂಗಳ ಅವಧಿಯಲ್ಲಿ ನಿಮ್ಮ ರಿಪೋರ್ಟ್ ಕಾರ್ಡ್ ಅನ್ನು ನಾವು ಪರಿಶೀಲಿಸಲಿದ್ದೇವೆ. ಹೀಗಾಗಿ ಹೊಸ ವಿಜನ್ ಬೆಳೆಸಿಕೊಳ್ಳಿ. ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯರು ಕೆಲಸಕ್ಕಾಗಿ ಹಂಬಲಿಸಿ ಬರುತ್ತಿದ್ದು, ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕಾರ್ಯಕ್ರಮಗಳತ್ತ ಗಮನನೀಡಿ ಎಂದು ಹೇಳಿದರು.
ಹಿಂದುಳಿದ ಮಹಿಳೆಯರಿರುವ ಕಡೆಗಳಲ್ಲಿ ಅವರಿಗೆ ಸೂಕ್ತ ಉದ್ಯೋಗಗಳನ್ನು ಕಲ್ಪಿಸುವತ್ತ, ಪೂರಕ ತರಬೇತಿ ನೀಡುವತ್ತ ಆಲೋಚಿಸಬೇಕು. ಇ-ಆಡಳಿತ ನಿರ್ವಹಣೆಯತ್ತ ಗಮನ ಕೊಡಿ. ಕೆಲಸದಲ್ಲಿ ಹೊಂದಾಣಿಕೆ ವ್ಯವಹಾರ ಬೇಡ. ಅನಗತ್ಯ ಒತ್ತಡವೂ ಬೇಡ ಎಂದೂ ಕಿವಿಮಾತು ಹೇಳಿದರು.
ನಿಮ್ಮ ಸೇವಾವಧಿಯಲ್ಲಿ ನೀವಿರುವ ಊರು, ನಿಮ್ಮ ಗ್ರಾಪಂ ಕಚೇರಿ ಸುಂದರವಾಗಿಡಿ. ಸರ್ಕಾರಿ ಶಾಲೆ, ಅಂಗನವಾಡಿಗಳಲ್ಲಿ ಓದುವ ಮಕ್ಕಳು ನಿಮ್ಮ ಮಕ್ಕಳೆಂದು ಭಾವಿಸಿ ಅಲ್ಲಿನ ಅಗತ್ಯಗಳನ್ನು ಪೂರೈಸಿ. ಕಾಲಕಾಲಕ್ಕೆ ಮಕ್ಕಳ ಆರೋಗ್ಯ ತಪಾಸಣೆ ನಡೆಯುತ್ತಿದೆಯೇ, ಪಿಎಚ್‌ಸಿಗಳಲ್ಲಿ ಸಕಾಲಕ್ಕೆ ವೈದ್ಯರು ಬರುತ್ತಾರೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಿ. ಶಾಲಾ ಸಮಿತಿಯವರೊಂದಿಗೆ ಉತ್ತಮ ಸಂಪರ್ಕ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ಗೌಡ ಮಾತನಾಡಿ, ಜಿಲ್ಲಾ ಸಚಿವರ ಸೂಚನೆಯಂತೆ ಮಾಳಗೊಂಡನಹಳ್ಳಿ, ಬಸಾಪುರ ಮತ್ತಿತರ ಹಳ್ಳಿಗಳಲ್ಲಿ ಫಲಾನುಭವಿಗಳಿಗೆ ಸುಮಾರು 500 ಹಸು ನೀಡಲಾಗಿದೆ. ಇದರಿಂದ ಹಾಲಿನ ಉತ್ಪಾದನೆ ಹೆಚ್ಚಳವಾಗಿದೆ ಎಂದು ಹೇಳಿದರು.
ಎಸ್ಟಿ ಜನಾಂಗದವರೇ ಹೆಚ್ಚಿರುವ ತೋಳಹುಣಸೆಯಲ್ಲಿ ಗ್ರಾಮಸಭೆ ನಡೆಸಿದ್ದು, ಮಹಿಳೆಯರಿಗೆ ಔದ್ಯೋಗಿಕ ತರಬೇತಿ ನೀಡುವ ಪ್ರಯತ್ನ ಸಫಲವಾಗಿಲ್ಲ ಎಂದು ಪಿಡಿಒ ಹೇಳಿದರು. ಯುವ ಸಮೂಹವನ್ನು ಬಳಸಿ, ಆಯಾ ಜನರಿಗೆ ಬೇಕಾದ ಕೆಲಸದತ್ತ ಗಮನ ನೀಡಿ ಎಂದು ಸಂಸದರು ತಿಳಿಸಿದರು.
36 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿ
ಜಿಲ್ಲೆಯ 194 ಗ್ರಾಪಂಗಳಿಂದ 2022-23ನೇ ಸಾಲಿನಲ್ಲಿ 9.95 ಕೋಟಿ ರೂ.ಗಳ ತೆರಿಗೆ ವಸೂಲಾತಿ ಮಾಡಲಾಗಿತ್ತು. 2023-24ನೇ ಸಾಲಿನಲ್ಲಿ 10.38 ಕೋಟಿ ರೂ. ವಸೂಲಾತಿಯಾಗಿತ್ತು. ಈ ಬಾರಿ 36 ಕೋಟಿ ರೂ. ವಸೂಲಿ ಗುರಿ ಇದ್ದು ಇದರಲ್ಲಿ ಗರಿಷ್ಠ 30 ಕೋಟಿ ರೂ. ಸಂಗ್ರಹಣೆ ನಿರೀಕ್ಷೆ ಇದೆ ಎಂದು ಸಿಇಒ ಹೇಳಿದರು.
ಸಂಸದರ ಪ್ರಶ್ನೆಗೆ ಸ್ಪಂದಿಸಿದ ಸಿಇಒ, ದಾವಣಗೆರೆ ನಗರ ಮಟ್ಟದಲ್ಲಿ 1200 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದಾಗಿ ಪಾಲಿಕೆ ಆಯುಕ್ತರ ಸಮೀಕ್ಷಾ ವರದಿ ಇದೆ. ಇದನ್ನು ಫಾಲೋಅಪ್ ಮಾಡಿ ಕ್ರಮ ವಹಿಸಬೇಕು ಎಂದು ಬಿಇಒಗೆ ಸೂಚಿಸಿದರು.  ಸಭೆಯಲ್ಲಿ ತಾಪಂ ಇಒ ರಾಮಭೋವಿ ಇತರ ಅಧಿಕಾರಿಗಳಿದ್ದರು.
---