ಜಿಲ್ಲೆ

ಎಪಿಎಂಸೀಲಿ ಭತ್ತದ ಇ-ಟೆಂಡರ್ ಸದ್ದು!  ಉತ್ತಮ ದರ ರೈತರ ಖುಷಿ

ಡಿ. ಎಂ. ಮಹೇಶ್

ಡಿ.ಎಂ.ಮಹೇಶ್, ದಾವಣಗೆರೆ
ಭತ್ತದ ಸುಗ್ಗಿಕಾಲ ಶುರುವಾಗಿದ್ದು ಇ-ಟೆಂಡರ್ ಖರೀದಿ ಪ್ರಕ್ರಿಯೆಗೆ ದಾವಣಗೆರೆ ಎಪಿಎಂಸಿ ಪ್ರಾಂಗಣದಲ್ಲಿ ಚಾಲನೆ ದೊರೆತಿದೆ.  ಸೋಮವಾರದ ಮೊದಲ ದಿನವೇ 2510 ರೂ. ಗರಿಷ್ಠ ಧಾರಣೆ ಸಿಕ್ಕಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಬೇಸಿಗೆಯಲ್ಲಿ ಬರಗಾಲದ ಕಾರಣಕ್ಕೆ ಭತ್ತದ ಗದ್ದೆಗಳನ್ನು ಬೀಳು ಬಿಟ್ಟಿದ್ದ ಅನ್ನದಾತರು ಕಂಗಾಲಾಗಿದ್ದರು. ಜಿಲ್ಲೆಯಲ್ಲಿ ಉತ್ತಮ ಮುಂಗಾರು ಪ್ರವೇಶದಿಂದಾಗಿ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ. ಸುಮಾರು 3 ಲಕ್ಷ ಟನ್ ಇಳುವರಿ ನಿರೀಕ್ಷೆ ಇದೆ. ಅದಕ್ಕೆ ಉತ್ತಮ ಬೆಲೆ ಸಿಗುವ ಉಮೇದಿನಲ್ಲಿರುವ ರೈತರು ಎಪಿಎಂಸಿಯತ್ತ ಮುಖ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ ಒಂದಕ್ಕೆ 2320 ರೂ. ದರ ನಿಗದಿ ಪಡಿಸಿದೆ. ಆದರೆ ದಾವಣಗೆರೆ ಎಪಿಎಂಸಿಯಲ್ಲಿ ಒಂದೇ ದಿನದಲ್ಲಿ 2354 ರೂ.ಗಳ ಸರಾಸರಿ ಬೆಲೆ ರೈತರಿಗೆ ಸಿಗುತ್ತಿರುವುದು ಸಮಾಧಾನಕರ.
2021ರಲ್ಲಿ ದಾವಣಗೆರೆ ಎಪಿಎಂಸಿಯಲ್ಲಿ ಭತ್ತದ ಇ-ಟೆಂಡರ್ ಪ್ರಯೋಗ ನಡೆದಿತ್ತಾದರೂ ಸಫಲ ಕಂಡಿರಲಿಲ್ಲ. ಇತ್ತೀಚೆಗೆ ಜಿಲ್ಲೆಯ ರೈತರ ಒಕ್ಕೂಟ ಮಾಡಿದ್ದ ಮನವಿಗೆ ಸ್ಪಂದಿಸಿರುವ ಎಪಿಎಂಸಿ ಅಧಿಕಾರಿಗಳು, ಎಲ್ಲ ತಾಲೀಮು ನಡೆಸಿಯೇ ಇ-ಟೆಂಡರ್ ಖರೀದಿಗೆ ಅಣಿಯಾಗಿದ್ದಾರೆ. ಎಲ್ಲ ವರ್ತಕರು, ದಲಾಲರು, ಹಮಾಲರು ಸಮ್ಮತಿಸಿದ್ದಾರೆ.
ಸೋಮವಾರ ಮೊದಲ ದಿನದಂದು 9342 ಕ್ವಿಂ. ಭತ್ತ ಆವಕವಾಗಿದ್ದರೆ, ಇದರಲ್ಲಿ 8054 ಕ್ವಿಂ. ವಹಿವಾಟು ನಡೆದಿದೆ. ಉಳಿದಂತೆ 28 ರಾಶಿಗಳಲ್ಲಿ ಭತ್ತ ತೇವಾಂಶ ಹೆಚ್ಚಿದ್ದರಿಂದ ಮಾರಾಟಕ್ಕೆ ಪರಿಗಣನೆಯಾಗಲಿಲ್ಲ.
ಆರ್‌ಎನ್‌ಆರ್ ತಳಿಯ ಭತ್ತಕ್ಕೆ 2510 ರೂ.ಗಳ ಗರಿಷ್ಠ ಧಾರಣೆ ಸಿಕ್ಕಿದ್ದರೆ, ಶ್ರೀರಾಮ್ ಸೋನಾ ತಳಿಗೆ ಗರಿಷ್ಠ 2760 ರೂ. ಬೆಲೆ ದಕ್ಕಿದೆ. ಒಂದೇ ದಿನದಲ್ಲಿ 150 ರೂ. ದರ ಹೆಚ್ಚಳವಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ರೈತರ ಸಂಖ್ಯೆ ಹೆಚ್ಚುವ ನಿರೀಕ್ಷೆಗಳಿವೆ.
ಇ-ಟೆಂಡರ್‌ನಿಂದಾಗಿ ಸಿಗುವ ಸ್ಪರ್ಧಾತ್ಮಕ ಬೆಲೆ ರೈತರಿಗೆ ಉತ್ಸಾಹ ನೀಡಿದೆ. ಗುಣಮಟ್ಟದ ಭತ್ತ ಸಿಗುವ ಖಾತ್ರಿಯಿಂದಾಗಿ ಖರೀದಿದಾರರಲ್ಲೂ ಖುಷಿ ಜತೆಗೆ ಪೈಪೋಟಿಯೂ ಹೆಚ್ಚಿದೆ. ಕೈಚೀಟಿ ಬರೆದುಕೊಡುತ್ತಿದ್ದ ಬೆರಳೆಣಿಕೆಯ ದಲಾಲರು ಮಾತ್ರ ಈ ವಹಿವಾಟಿನಿಂದ ದೂರ ಉಳಿದಿದ್ದಾರೆ.
ಎಪಿಎಂಸಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಒಟ್ಟು ಎರಡವಧಿಗೆ ಇ ಟೆಂಡರ್‌ಗೆ ಅವಕಾಶ ಮಾಡಿಕೊಡಲಾಗಿದೆ. ತೇವಾಂಶ ಹೆಚ್ಚಿದ್ದಲ್ಲಿ ರೈತರು ಪ್ರಾಂಗಣದಲ್ಲಿಯೇ ಒಣಗಿಸಿ ನಿಶ್ಚಯಿಸಿದ ದಿನವೇ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬಹುದಾಗಿದೆ.
ಯಾವ ಜಿಲ್ಲೆಯ ರೈತರಾದರೂ ಇ ಟೆಂಡರ್‌ನಲ್ಲಿ ಧಾನ್ಯ ಮಾರಾಟಕ್ಕೆ ತರಬಹುದಾಗಿದೆ. ಹೊರ ಜಿಲ್ಲೆಗಳ ಟ್ರೇಡರ್‌ಗಳೂ ಸಹ ನಿಗದಿತ ಸಾಫ್ಟ್‌ವೇರ್‌ನಲ್ಲಿ ಮ್ಯಾಪಿಂಗ್ ಮಾಡಿಕೊಳ್ಳುವ ಮೂಲಕ ಧಾನ್ಯ ಬಿಡ್ ಮಾಡಿ ಬಿಕರಿ ಮಾಡಬಹುದಾಗಿದೆ. ಕೊಂಡ ದರ, ಅಂಗಡಿ ಹೆಸರು ಬೆರಳ ತುದಿಯಲ್ಲಿ ವಿವರ ಸಿಗುವ ಕಾರಣಕ್ಕೆ ಇ-ಟೆಂಡರ್ ವರ್ತಕರಿಗೂ ಅಪ್ಯಾಯಮಾನ.
---
ಎಲ್ಲರ ಸಹಮತದೊಂದಿಗೆ ಭತ್ತದ ಇ ಟೆಂಡರ್ ಆರಂಭಿಸಿದ್ದೇವೆ. ಸ್ಪರ್ಧಾತ್ಮಕ ಬೆಲೆ ಸಿಕ್ಕಿರುವುದರಿಂದ ರೈತರೂ ಖುಷಿಯಾಗಿದ್ದಾರೆ. ಭತ್ತ ಒಣಗಿಸಿ ತರುವುದೂ ಸೇರಿ ವಹಿಸಬೇಕಾದ ಕ್ರಮಗಳ ಕುರಿತಂತೆ ಎಪಿಎಂಸಿ ಯಾರ್ಡ್‌ನಲ್ಲಿ ಶೀಘ್ರವೇ ಫಲಕ ಹಾಕಲಾಗುವುದು. ರೈತ ಮುಖಂಡರಿಗೆ ಕರಪತ್ರಗಳನ್ನು ಮುದ್ರಿಸಿ ನೀಡಲಾಗುವುದು.
ಎಚ್.ಎಂ.ಸಿ. ರಾಣಿ
ದಾವಣಗೆರೆ ಎಪಿಎಂಸಿ ಉಪನಿರ್ದೇಶಕಿ.
-----
ನಮ್ಮ ಮನವಿಗೆ ದಾವಣಗೆರೆ ಎಪಿಎಂಸಿ ಅಧಿಕಾರಿ ವರ್ಗದವರು ಸ್ಪಂದಿಸಿ ಈ ಪ್ರಯತ್ನಕ್ಕೆ ಕೈ ಹಾಕಿರುವುದು ಒಳ್ಳೆಯ ಬೆಳವಣಿಗೆ.  ಕೇಂದ್ರ ಸರ್ಕಾರ ನಿಗದಿಪಡಿಸಿದ 2320 ರೂ. ಕನಿಷ್ಠ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ 600 ರೂ.ಗಳ ಪ್ರೋತ್ಸಾಹಧನ ಸೇರಿಸಿ ಕ್ವಿಂ. ಒಂದಕ್ಕೆ 2920 ರೂ.ರಂತೆ ಭತ್ತ ಖರೀದಿಸಬೇಕು.
ಕೊಳೇನಹಳ್ಳಿ ಸತೀಶ್
ಜಿಲ್ಲಾ ರೈತ ಒಕ್ಕೂಟದ ಮುಖಂಡ.
--
ನಾನು ಬೆಳೆದ ಭತ್ತ 2510 ರೂ.ಗೆ ಮಾರಾಟವಾಗಿದೆ. ಇ- ಟೆಂಡರ್‌ನಿಂದ ಉತ್ತಮ ದರ ಸಿಗುತ್ತದೆ ಎಂಬುದೇನೋ ಸರಿ. ಆದರೆ ಬಿಡ್ ಆದ ಭತ್ತವನ್ನು ಹಮಾಲರು ಸಕಾಲಕ್ಕೆ ಚೀಲಗಳಿಗೆ ತುಂಬಲು ಸಹಕರಿಸಬೇಕು. ದೂರದ ಊರಿನಿಂದ ಬರುವ ರೈತರನ್ನು ಸತಾಯಿಸಬಾರದು.
ವೆಂಕಟರಮಣಪ್ಪ
ಪರಶುರಾಮಪುರದ ರೈತ.