ದಾವಣಗೆರೆ: ಕರೊನಾದಿಂದಾಗಿ ಎಲ್ಲೆಡೆ ಕಾರ್ಯ ಚಟುವಟಿಕೆಗಳು ಸ್ತಬ್ಧವಾಗಿವೆ. ಹಾಗೆಯೇ ಬೇಸಿಗೆಯಲ್ಲಿ ನಡೆಯಬೇಕಿದ್ದ ಮಕ್ಕಳ ಶಿಬಿರಗಳ ಸದ್ದೂ ಇಲ್ಲ. ಕೆಲವು ಸಂಸ್ಥೆಗಳು ಇದಕ್ಕೆ ಪರ್ಯಾಯವಾಗಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಆನ್‌ಲೈನ್‌ನಲ್ಲೇ ವೇದಿಕೆ ಒದಗಿಸಿವೆ.
ಹಿಂದಿನ ವರ್ಷಗಳಲ್ಲಿ ಏಪ್ರಿಲ್, ಮೇನಲ್ಲಿ ಲೆಕ್ಕವಿಲ್ಲದಷ್ಟು ಬೇಸಿಗೆ ಶಿಬಿರಗಳು ಆಯೋಜನೆಗೊಳ್ಳುತ್ತಿದ್ದವು. ಆದರೆ, ಈ ಬಾರಿ ಕರೊನಾದಿಂದಾಗಿ ಶಿಬಿರಗಳು ನಡೆದಿಲ್ಲ. ಲಾಕ್‌ಡೌನ್‌ನಂತಹ ಕಠಿಣ ಸಂದರ್ಭದಲ್ಲಿ ಕೆಲವು ಸಂಸ್ಥೆಗಳು ಮಕ್ಕಳು ಮನೆಯಲ್ಲೇ ಇದ್ದುಕೊಂಡು ಆನ್‌ಲೈನ್ ಮೂಲಕ ಕಲೆ, ಕೌಶಲ ಪ್ರದರ್ಶನಕ್ಕೆ ಉತ್ತೇಜನ ನೀಡಿವೆ.
ದಾವಣಗೆರೆಯ ರೋಟರಿ ಕ್ಲಬ್, ಸ್ಟೆಪ್ಸ್ ಡ್ಯಾನ್ಸ್ ಫ್ಯಾಕ್ಟರಿ, ಚಿರಂತನ ಸಂಸ್ಥೆ ಸಹಯೋಗದಲ್ಲಿ ಆನ್‌ಲೈನ್ ಮೂಲಕ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಹಲವು ಮಕ್ಕಳು ಕರೊನಾ ಸೇನಾನಿಗಳಿಗೆ ಧನ್ಯವಾದ ತಿಳಿಸುವ, ಚಿತ್ರಕಲೆ, ಸಾಂಪ್ರದಾಯಿಕ ಉಡುಗೆ, ಕರೊನಾ ಜಾಗೃತಿ ಪೋಸ್ಟರ್ ರಚನೆ, ಅಡುಗೆ ತಯಾರಿ ಮತ್ತಿತರ ಸ್ಪರ್ಧೆಗಳನ್ನು ಹಮ್ಮಿಕೊಂಡಿವೆ.
ಇದರಲ್ಲಿ ಅಂದಾಜು 80ಕ್ಕೂ ಅಧಿಕ ಮಕ್ಕಳು ಭಾಗವಹಿಸಿ, ಕರೊನಾ ಜಾಗೃತಿ ಮೂಡಿಸುವ ಚಿತ್ರ ರಚಿಸಿದ್ದಾರೆ. ಇವುಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಸಿಕೊಂಡಿದ್ದಾರೆ.