ಜಿಲ್ಲೆ

ಒನಕೆ ಓಬವ್ವನ ಸಾಹಸ ಮಹಿಳೆಯರಿಗೆ ಸ್ಪೂರ್ತಿ

ಡಿ. ಎಂ. ಮಹೇಶ್

ದಾವಣಗೆರೆ: ವೀರವನಿತೆ ಒನಕೆ ಓಬವ್ವನ ಸ್ವಾಮಿನಿಷ್ಠೆ, ಶೌರ್ಯ ಹಾಗೂ ಸಾಹಸ ಮಹಿಳೆಯರಿಗೆ ಸ್ಪೂರ್ತಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒನಕೆ ಓಬವ್ವ ಸ್ವಾಮಿನಿಷ್ಠೆಯಿಂದ ನಾಡರಕ್ಷಣೆಗೆ ಅಪ್ರತಿಮ ಸಾಹಸ  ಮೆರೆದಿದ್ದಾರೆ, ದೇಶ ಹಾಗೂ ಸಮಾಜಸೇವೆಗೆ ತ್ಯಾಗ ಮಾಡಿದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣದ ಜತೆಗೆ ರಾಷ್ಟ್ರದ ಪ್ರಗತಿ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಮೊದಲಾದವರು ದೇಶಕ್ಕಾಗಿ ತಮ್ಮ ಜೀವನ ತ್ಯಾಗ ಮಾಡಿ ಅವಿಸ್ಮರಣೀಯರಾಗಿದ್ದಾರೆ. ಯಾರು ತ್ಯಾಗ ಮಾಡುತ್ತಾರೋ ಅವರು ಇತಿಹಾಸದ ಪುಟದಲ್ಲಿ ದಾಖಲಾಗುತ್ತಾರೆ ಎಂದು ತಿಳಿಸಿದರು.
ಪ್ರಸಕ್ತ ದಿನಗಳಲ್ಲಿ ಶೇ.50 ರಷ್ಟು ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಮಾಜಕ್ಕೆ ದಾರಿದೀಪ ಆಗಬೇಕು. ಸಮಾಜಸೇವೆ ಹಾಗೂ ಅವ್ಯಕ್ತ ದಾನದಿಂದ ಸಿಗುವ ತೃಪ್ತಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ ಎಂದು ಹೇಳಿದರು.
ಮೇಯರ್ ಕೆ.ಚಮನ್‌ಸಾಬ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೀರವನಿತೆ ಒನಕೆ ಓಬವ್ವ ತಾಯಿನಾಡಿನ ರಕ್ಷಣೆಗೆ ಶತ್ರು ಸೈನಿಕರನ್ನು ಸದೆಬಡಿದು ಉತ್ತಮ ಕೆಲಸ ನಿರ್ವಹಿಸುವ ಮೂಲಕ ಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು.
ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ರುದ್ರಮುನಿ ಮಾತನಾಡಿ, ನಗರದ ಒಂದು ವೃತ್ತಕ್ಕೆ ಒನಕೆ ಓಬವ್ವನ ಹೆಸರಿಡಬೇಕು ಹಾಗೂ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕು. ನಗರದ ರಸ್ತೆಯೊಂದಕ್ಕೆ ಕವಿ ಸಿದ್ದಲಿಂಗಯ್ಯ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕೋರಿದರು.
ಓಂಕಾರಪ್ಪ ಒನಕೆ ಓಬವ್ವ ಅವರ ಕುರಿತು ಉಪನ್ಯಾಸ ನೀಡಿದರು. ಪಾಲಿಕೆ ಉಪ ಮೇಯರ್ ಶಾಂತಕುಮಾರ್ ಸೋಗಿ, ಸದಸ್ಯ ಮಂಜುನಾಥ್ ಗಡಿಗುಡಾಳ್, ಎಎಸ್‌ಪಿ ವಿಜಯಕುಮಾರ್ ಎಂ. ಸಂತೋಷ್, ದಲಿತ ಮುಖಂಡರಾದ ಬಿ.ಎಚ್.ವೀರಭದ್ರಪ್ಪ, ಜಯಪ್ರಕಾಶ್, ಛಲವಾದಿ ಸಮಾಜ ಮಹಿಳಾ ಘಟಕದ ಉಪಾಧ್ಯಕ್ಷೆ ರುದ್ರಮ್ಮ, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ನಾಗರಾಜ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಗಾಯತ್ರಿ ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು. ಗಂಗಾಧರ್ ನಿಟ್ಟೂರು ನಿರೂಪಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಛಲವಾದಿ ಮಹಾಸಭಾ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.