ಜಿಲ್ಲೆ

ಸಿಎಂ ಬದಲಾವಣೆ, ತಿರುಕನ ಕನಸು   ಶಾಮನೂರು ಶಿವಶಂಕರಪ್ಪ ಹೇಳಿಕೆ

ಡಿ. ಎಂ. ಮಹೇಶ್

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಕಾರ್ಯಕ್ರಮಗಳ ಜತೆಗೆ ರಾಜ್ಯದ ಜನರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಅವರ ಆಡಳಿತದಲ್ಲಿ ಸರ್ಕಾರ, ಆರ್ಥಿಕ ಸಮತೋಲನ ಕಾಯ್ದುಕೊಂಡಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ  ಸಮರ್ಥಿಸಿದರು.
ನಗರದ 14ನೇ ವಾರ್ಡ್‌ನಲ್ಲಿ 1 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸಿದ್ದರಾಮಯ್ಯ ಅವರಿಂದಾಗಿಯೇ ರಾಜ್ಯದಲ್ಲಿ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ. ಪಂಚ ಗ್ಯಾರಂಟಿ ಕಾರ್ಯಕ್ರಮಗಳ ನಡುವೆಯೂ ಸರ್ಕಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸ್ಥಾನ ಬದಲಾಗುತ್ತದೆ ಎಂಬುದು ಬಿಜೆಪಿಯವರು ಕಾಣುತ್ತಿರುವ ತಿರುಕನ ಕನಸಿನಂತಿದೆ ಎಂದು ಟೀಕಿಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಂದು ವರ್ಷದಿಂದ 30 ಕೋಟಿ ರೂ. ಅನುದಾನ ತರಲಾಗಿದೆ. ಇದರಲ್ಲಿ ಕ್ಷೇತ್ರದ 50ಕ್ಕೂ ಹೆಚ್ಚು ಶಾಲಾ ಕೊಠಡಿಗಳು, ದೇವಸ್ಥಾನಗಳು, ಸಮುದಾಯ ಭವನ, ಶಾದಿಮಹಲ್, ರಸ್ತೆ, ಒಳಚರಂಡಿ ಅಭಿವೃದ್ಧಿ ಮಾಡಲಾಗುವುದು. ಕ್ಷೇತ್ರದ ಜನರ ಸಮಸ್ಯೆಗಳಿಗೆ ನಮ್ಮ ಮನೆ ಬಾಗಿಲು ಸದಾ ತೆರೆದಿರಲಿದೆ ಎಂದು ಹೇಳಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಶಾಸಕರು ಕಂಕಣ ತೊಟ್ಟು ಕೆಲಸ ಮಾಡುತ್ತಿದ್ದು ಜನರು  ಸಹಕಾರ ನೀಡುವಂತೆ ಮನವಿ ಮಾಡಿದರು.
ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್, ಪಾಲಿಕೆ ಸದಸ್ಯರಾದ ಕೆ.ಚಮನ್‌ಸಾಬ್, ಇಟ್ಟಿಗುಡಿ ಮಂಜುನಾಥ್, ಸ್ಥಳೀಯ ಮುಖಂಡರಾದ ಹಾಸಬಾವಿ ರಾಜಣ್ಣ, ಪಾಲಿಕೆ ಇಂಜಿನಿಯರ್‌ಗಳು ಇತರರಿದ್ದರು.