ದಾವಣಗೆರೆ : ದಿನಪತ್ರಿಕೆಗಳನ್ನು ಓದುವ ಹವ್ಯಾಸದಿಂದ ಆತ್ಮವಿಶ್ವಾಸ ಜಾಗೃತವಾಗಲಿದೆ. ಕೀಳರಿಮೆ ದೂರವಾಗಲಿದೆ ಎಂದು ವಿದ್ಯಾನಗರ ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎನ್. ಮಳವಳ್ಳಿ ಹೇಳಿದರು.
ವಿದ್ಯಾನಗರ ರೋಟರಿ ಕ್ಲಬ್ ವತಿಯಿಂದ ತಾಲೂಕಿನ ಕುರ್ಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಪತ್ರಿಕೆಗಳನ್ನು ಓದುವುದರಿಂದ ಅದರಿಂದ ಪಡೆದ ಜ್ಞಾನ ಜೀವನದಲ್ಲಿ ಎಂದಾದರೂ ಉಪಯೋಗಕ್ಕೆ ಬರಲಿದೆ. ಈಗ ಸಕಾಲಕ್ಕೆ ಪತ್ರಿಕೆಗಳು ಮನೆಬಾಗಿಲಿಗೆ ಬರಲಿವೆ. ನಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ನಿದರ್ಶನದೊಂದಿಗೆ ವಿವರಿಸಿದರು.
ಸರ್ಕಾರೇತರ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬಂದಿದೆ. ಪೋಲಿಯೋ ನಿರ್ಮೂಲನೆಯಲ್ಲಿ, ದಾನಿಗಳ ಸಹಕಾರದೊಂದಿಗೆ ಪ್ರತಿ ವರ್ಷ ಲಕ್ಷ ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ. ಅನೇಕ ಕಡೆಗಳಲ್ಲಿ ಕ್ಯಾನ್ಸರ್ ಪತ್ತೆ ಯಂತ್ರಗಳನ್ನು ನೀಡಿದೆ ಎಂದು ಹೇಳಿದರು.
ಜಿಲ್ಲಾ ಸಂಯೋಜಕ ವಿಶ್ವಜಿತ್ ಕೆ. ಜಾಧವ್ ಮಾತನಾಡಿ, ಶಿಕ್ಷಣದ ಗುಣಮಟ್ಟದತ್ತ ರೋಟರಿ ಗಮನ ಹರಿಸಿದೆ. ರೋಟರಿ ಇಂಡಿಯಾ ಲಿಟರಸಿ ಪ್ರೋಗ್ರಾಂ ಅಡಿಯಲ್ಲಿ ಟೀಚ್ ಯೋಜನೆಯಡಿ ಶಿಕ್ಷಕರಿಗೆ ಬೋಧನಾ ನೈಪುಣ್ಯ, ಮಕ್ಕಳಿಗೆ ಕಂಪ್ಯೂಟರ್ ಜ್ಞಾನ, ಅನಕ್ಷರಸ್ಥರಿಗೆ ಅಕ್ಷರ ಅರಿವು ಮೂಡಿಸಲಾಗುತ್ತಿದೆ ಎಂದರು.
ಅತಿ ಕಡಿಮೆ ವೆಚ್ಚದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಿಇಟಿ ತರಬೇತಿ ನೀಡುತ್ತಿರುವ ಸಂಸ್ಥೆಯು ನೀಟ್ ತರಬೇತಿ ಕಡೆಗೂ ಗಮನ ಹರಿಸಿದೆ ಎಂದರಲ್ಲದೆ ಇಂದಿನ ಮಕ್ಕಳಲ್ಲಿ ದೇಶದ ಬಗ್ಗೆ ಕಾಳಜಿ ಇರಬೇಕು. ಉತ್ತಮ ಸ್ಥಿತಿಗೆ ತಲುಪಿದಾಗ ಸಮಾಜಸೇವೆ ಮಾಡಬೇಕು ಎಂದು ತಿಳಿಸಿದರು.
ಶಾಲೆಯ ಮಕ್ಕಳಿಗೆ ಆಂಗ್ಲ ಪದಕೋಶ, ಕನ್ನಡ ರತ್ನಕೋಶ ಕೈಪಿಡಿಗಳನ್ನು ವಿತರಿಸಿದ ಕುರ್ಕಿ ಗ್ರಾಮದ ದಾನಿ ಕೆ.ಜಿ.ವೇದಮೂರ್ತಿ ಗೌಡ ಮಾತನಾಡಿ ಮಕ್ಕಳು ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು. ಓಜೋನ್ ಪದರ ಹಾನಿಯಾಗುತ್ತಿದ್ದು ಜಾಗತಿಕ ತಾಪಮಾನ ಹೆಚ್ಚಿದೆ. ಶಾಲಾ ಹಂತದಿಂದಲೇ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವಿಜಯವಾಣಿ ಪತ್ರಿಕೆಯ ದಾವಣಗೆರೆ ಆವೃತ್ತಿ ಮುಖ್ಯಸ್ಥ ಎಂ.ಬಿ. ನವೀನ್ ಮಾತನಾಡಿ ವಿದ್ಯಾರ್ಥಿಗಳ ಸ್ನೇಹಿತನಂತಿರುವ ವಿದ್ಯಾರ್ಥಿ ಮಿತ್ರ ಪತ್ರಿಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಓದಿಗೆ ಪಠ್ಯಾಧಾರಿತ ಮಾಹಿತಿ ಜತೆಗೆ ಇಂದಿನ ವಿದ್ಯಮಾನಗಳ ಕುರಿತ ಹಲವಾರು ವಿಚಾರಗಳನ್ನು ಹೊತ್ತು ಬರಲಿದೆ. ಇದನ್ನು ಓದಿ ಮನನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಗೌರ‌್ನರ್ ಎಂ.ಎನ್. ಬಿಲ್ಲಳ್ಳಿ, ಕಾರ್ಯದರ್ಶಿ ಎಚ್. ಆಂಜನೇಯಮೂರ್ತಿ, ದಾನಿ ಜಿ.ಬಿ. ಸಿದ್ದಪ್ಪ, ರೋಟರಿ ಕ್ಲಬ್ ಸದಸ್ಯರಾದ ರಾಮಗೊಂಡನಹಳ್ಳಿ ಎಚ್. ದಯಾನಂದ್, ಪರಮೇಶ್ವರಪ್ಪ, ಮಂಜಪ್ಪ, ಬಿ.ಆರ್. ವೀರಣ್ಣ, ಮುಖ್ಯ ಶಿಕ್ಷಕಿ ಕೆ.ಬಿ. ಮೀರಾ, ಎಸ್‌ಡಿಎಂಸಿ ಅಧ್ಯಕ್ಷ ಓಂಕಾರಪ್ಪ, ಎ.ಎಂ. ಸಿದ್ದೇಶ್ ಇದ್ದರು. ವಿನುತಾ ಪ್ರಾರ್ಥನಾಗೀತೆ ಹಾಡಿದರೆ, ಶಿಕ್ಷಕ ಕೂಲಂಬಿ ಜಗದೀಶ್ ಸ್ವಾಗತಿಸಿದರು. ಶಿಕ್ಷಕಿ ಎಸ್.ಪಾರ್ವತಿ ಕಾರ್ಯಕ್ರಮ ನಿರ್ವಹಿಸಿದರು. ಶಕುಂತಲಾ ವಂದಿಸಿದರು.
---