ದಾವಣಗೆರೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಜತೆಗೆ ತಾಂತ್ರಿಕ ಜ್ಞಾನ ಅವಶ್ಯಕ. ಇದರಿಂದ ಹೆಚ್ಚಿನ ಸಾಧನೆ ಸಾಧ್ಯವಾಗಲಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸಿಇಟಿ ಮತ್ತು ನೀಟ್ ಪರೀಕ್ಷೆಯ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರತಿಯೊಂದು ವಿಷಯವು ಉಪಯುಕ್ತವಾಗಿದ್ದು, ಯಾವುದೇ ವಿಷಯಗಳ ನಿರ್ಲಕ್ಷೃ ಮಾಡಬಾರದು. ಕಲಿಕೆಯ ಎಲ್ಲ ಹಂತಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಪರಿಪೂರ್ಣರಾಗಲು ಸಾಧ್ಯ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಜೀವನದಲ್ಲಿ ಸಿಗುವ ಅವಕಾಶಗಳನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಂಡರೆ ಗುರಿ ಸಾಧನೆಯ ಹಾದಿ ಸುಗಮವಾಗಲಿದೆ ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಕುರಿತು ಸ್ವಂತ ಚಿಂತನೆ ರೂಢಿಸಿಕೊಳ್ಳಬೇಕು. ಹೆತ್ತವರ ಪರಿಶ್ರಮದ ಫಲವಾಗಿ ಶಿಕ್ಷಣ ಪಡೆಯುತ್ತಿದ್ದು, ಸಾಧನೆಯ ಮೂಲಕ ಗೌರವ ತರಬೇಕು ಎಂದು ಹೇಳಿದರು.
ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಸಿಇಟಿ ಮತ್ತು ನೀಟ್ ಪರೀಕ್ಷೆ ತರಬೇತಿಯು 90 ದಿನಗಳ ಕಾಲ ನಡೆಯಲಿದ್ದು. ಪ್ರತಿದಿನ 2 ಗಂಟೆಯಂತೆ ಐದು ದಿನ ತರಗತಿ ನಡೆಸಲಾಗುತ್ತದೆ. ಜತೆಗೆ 19 ವರ್ಷ ಹಿಂದಿನ ಪ್ರಶ್ನೋತ್ತರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಎಸ್‌ಪಿ ಉಮಾ ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳು ಸಿಗರೇಟ್, ತಂಬಾಕು ಮುಂತಾದ ದುಶ್ಚಟಗಳಿಂದ ದೂರವಿರಬೇಕು, ಕಾಲೇಜುಗಳಲ್ಲಿ ಯಾರಾದರೂ ಇವುಗಳನ್ನು ಬಳಸುವುದು ಕಂಡುಬಂದಲ್ಲಿ ಕಾಲೇಜಿನ ಪ್ರಾಚಾರ್ಯರು ಮತ್ತು ಪೊಸಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಹಾಪೌರ ಕೆ.ಚಮನ್‌ಸಾಬ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕರಿಸಿದ್ದಪ್ಪ, ಖಾಸಗಿ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ಡಾ.ಜಯಂತ್, ಕಸಾಪ ಜಿಲ್ಲಾಧ್ಯಕ್ಷ ಬಿ ವಾಮದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಾಯತ್ರಿ ಇದ್ದರು.
ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ಯೂಟ್ಯೂಬ್ ಚಾನೆಲ್‌ಗೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಬುಕ್ ವಿತರಿಸಲಾಯಿತು.
----