ದಾವಣಗೆರೆ: ಕೋಲ್ಕತ್ತದ ಕರ್ತವ್ಯನಿರತ ಕಿರಿಯ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಪ್ರಕರಣದ ಬಗ್ಗೆ ನಿಸ್ಪ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸಲು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ವೈದ್ಯರು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಈ ಪ್ರಕರಣವು ದೇಶದಲ್ಲಿನ ವೈದ್ಯಕೀಯ ವೃತ್ತಿಪರರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರದ ಸಂಕೇತವಾಗಿದೆ. ಕೆಲಸದ ಸ್ಥಳದ ಹಿಂಸಾಚಾರವು ಭಯದ ವಾತಾವರಣವನ್ನು ಸೃಷ್ಟಿಸಲಿದೆ. ಜೀವಗಳನ್ನು ಉಳಿಸುವ ಮೀಸಲಾದ ಕೆಲಸದ ವಾತಾವರಣವನ್ನು ಹದಗೆಡಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಖಾತ್ರಿಪಡಿಸಬೇಕು. ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ ಸುಧೀರ್ಘ ವಿಚಾರಣೆ ನಡೆಸಬೇಕು. ಕೆಲಸದ ಸ್ಥಳದಲ್ಲಿ ವೈದ್ಯರ, ವಿಶೇಷವಾಗಿ ಮಹಿಳೆಯರ ಸುರಕ್ಷತೆ ಸುಧಾರಣೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳಾಗಿ ಘೋಷಿಸಿ, ಪ್ರಮುಖ ಕಡೆಗಳಲ್ಲಿ ಪೊಲೀಸ್, ಭದ್ರತಾ ಸಿಬ್ಬಂದಿ ನಿಯೋಜಿಸಿ. ದುರ್ಬಲ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯಗೊಳಿಸಬೇಕು. ಹೆಲ್ತ್‌ಕೇರ್ ಸೇವಾ ಸಿಬ್ಬಂದಿ ಮತ್ತು ಕ್ಲಿನಿಕಲ್ ಸ್ಥಾಪನೆಗಳು (ಹಿಂಸಾಚಾರದ ನಿಷೇಧ ಮತ್ತು ಆಸ್ತಿಗೆ ಹಾನಿ) ಮಸೂದೆ, 2019ರ ಜಾರಿ ಮರುಪರಿಶೀಲಿಸಬೇಕು. ಅಸ್ತಿತ್ವದಲ್ಲಿರುವ ರಾಜ್ಯ ಕಾನೂನುಗಳನ್ನು ಸುಧಾರಿಸಿ, ಸಮಗ್ರ ಕೇಂದ್ರೀಯ ಶಾಸನ ಜಾರಿಗೊಳಿಸಬೇಕು. ಆಸ್ಪತ್ರೆಗಳಲ್ಲಿ ಮೂರು-ಪದರದ ಭದ್ರತಾ ವ್ಯವಸ್ಥೆ ಅಳವಡಿಸಬೇಕೆಂದೂ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಐಎಂಎ ದಾವಣಗೆರೆ ಜಿಲ್ಲಾಧ್ಯಕ್ಷ ಡಾ. ಹರ್ಷಾ ಬುಳ್ಳಾಪುರ, ಕಾರ್ಯದರ್ಶಿ ಡಾ. ಇ.ಎಂ.ಸುರೇಂದ್ರ, ಉಪಾಧ್ಯಕ್ಷೆ ಡಾ. ರಶ್ಮಿ ಶೆಟ್ಟಿ, ಡಾ.ಎ.ಎಂ. ಶಿವಕುಮಾರ್, ಡಾ. ಅಶೋಕ್, ಡಾ. ಸೋಮಶೇಖರ್, ಡಾ. ರಜಿನಿ. ಡಾ. ಅನಿತಾ, ಡಾ. ಕಿರಣ್ ಹೆಗಡೆ, ಡಾ. ಎಚ್.ಬಿ. ಶಿವಕುಮ್, ಡಾ. ಎಚ್.ಎಂ. ರವೀಂದ್ರನಾಥ್, ಡಾ. ಸ್ವಪ್ನಾ, ಡಾ. ಗೀತಾ ಷಣ್ಮುಖಪ್ಪ, ಕರ್ನಾಟಕ ಸರ್ಕಾರಿ ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ.ಮಹೇಶ್, ಕಾರ್ಯದರ್ಶಿ ಡಾ. ಸುದೀಪ್ ಹಾಗೂ ಹಿರಿಯ-ಕಿರಿಯ ವೈದ್ಯರಿದ್ದರು.