ಜಿಲ್ಲೆ

ಜೋಡಿ ಕೊಲೆ ಪ್ರಕರಣದ ಆರೋಪಿ ಸೆರೆ

ದಾವಣಗೆರೆ: ಅಕ್ರಮ ಸಂಬಂಧ ಆರೋಪದಡಿ ಪತ್ನಿ ಮತ್ತು ಆಕೆಯ ಪ್ರಿಯಕರನ ಜೋಡಿ ಕೊಲೆ ಪ್ರಕರಣವನ್ನು ಹೊನ್ನಾಳಿ ಮತ್ತು ಚನ್ನಗಿರಿ ಪೊಲೀಸರು ಬೇಧಿಸಿದ್ದು, ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ಪ್ರತ್ಯೇಕ ಕಡೆಗಳಲ್ಲಿ ವರದಿಯಾಗಿದ್ದ ಪ್ರಕರಣಗಳು ಸಹಜ ಸಾವು ಮತ್ತು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಬೆಂಗಳೂರಲ್ಲಿದ್ದ ಆರೋಪಿ ಶಿವಕುಮಾರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ ಎಂದು ಎಸ್ಪಿ ಹನುಮಂತರಾಯ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊಳಲ್ಕೆರೆ ಮೂಲದ ಆರೋಪಿ, ಶಿಕ್ಷಕ ಶಿವಕುಮಾರ್ ಮತ್ತು ಚನ್ನಗಿರಿ ತಾಲೂಕು ಮಾದೇನಹಳ್ಳಿ ನಿವಾಸಿ ಶ್ವೇತಾ ಇಬ್ಬರೂ ಪ್ರೀತಿಸಿ, 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕಾರಿಗನೂರು ಕ್ರಾಸ್‌ನಲ್ಲಿ ವಾಸವಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಶ್ವೇತಾ, ವೇದಮೂರ್ತಿ ಎಂಬಾತನೊಂದಿಗೆ ಓಡಾಡುತ್ತಿರುವ ಬಗ್ಗೆ ಕೆಲವರು ಶಿವಕುಮಾರ್ ಬಳಿ ದೂರಿದ್ದರು.

ಅನೈತಿಕ ಸಂಬಂಧ ಆರೋಪದಡಿ ಸೆ.28ರಂದು ದಂಪತಿ ಕಲಹದ ಬಳಿಕ ಮನೆ ತೊರೆದಿದ್ದ ಪತ್ನಿ, ಪ್ರಿಯಕರನ ಜತೆ ಹೊನ್ನಾಳಿಯ ತುಂಗಭದ್ರಾ ನದಿ ದಂಡೆಗೆ ತೆರಳಿದ್ದರು. ಮಾಹಿತಿ ತಿಳಿದ ಆರೋಪಿ ಶಿವಕುಮಾರ್ ತನ್ನ ಸೋದರ ಶಿವರಾಜ್ ಜತೆ ತೆರಳಿ, ಬೆಲ್ಟ್‌ನಲ್ಲಿ ವೇದಮೂರ್ತಿ ಕತ್ತು ಹಿಸುಕಿ ಹತ್ಯೆಗೈದು ನದಿಗೆ ಎಸೆದಿದ್ದರು. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆನಂತರ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳೋಣವೆಂದು ನಂಬಿಸಿ, ಸೆ.29ರಂದು ಪತ್ನಿಯನ್ನು ಕರೆದೊಯ್ದ ಶಿವಕುಮಾರ್, ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿಯ ತೋಟದ ಬಳಿ ಕೊಲೆ ಮಾಡಿ ಬಾವಿಯಲ್ಲಿ ಶವ ಎಸೆದಿದ್ದ. ಬೆಂಗಳೂರಲ್ಲಿದ್ದ ಸೋದರಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿಸಿದ್ದ. ಶ್ವೇತಾಳ ಸೋದರ ಪ್ರದೀಪ ಚನ್ನಗಿರಿ ಠಾಣೆಗೆ ದೂರು ನೀಡಿದ್ದರು.

ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಜಿ.ಮುನ್ನೋಳಿ ನೇತೃತ್ವದಲ್ಲಿ ಸಿಪಿಐ ಆರ್.ಆರ್.ಪಾಟೀಲ್, ಚನ್ನಗಿರಿ ಪಿಎಸ್‌ಐ ಜಗದೀಶ್, ಅಪರಾಧ ವಿಭಾಗದ ಪಿಎಸ್‌ಐ ರೂಪ್ಲಿಬಾಯಿ ಮತ್ತವರ ತಂಡ ಈ ಕಾರ್ಯಾಚರಣೆ ನಡೆಸಿತ್ತು ಎಂದು ಎಸ್ಪಿ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಎಂ.ರಾಜೀವ್, ಡಿವೈಎಸ್ಪಿ ಪ್ರಶಾಂತ್ ಜಿ.ಮುನ್ನೋಳಿ ಇತರರಿದ್ದರು.