ಜಿಲ್ಲೆ

ಮೋದಿ ಚುನಾವಣಾ ರ‌್ಯಾಲಿಗೆ ಅನುಮತಿ ಬೇಡ  ಕಾಂಗ್ರೆಸ್ ಆಗ್ರಹ

ಡಿ. ಎಂ. ಮಹೇಶ್

ದಾವಣಗೆರೆ: ದಾವಣಗೆರೆಯಲ್ಲಿ ಏ.28ರಂದು ಹಮ್ಮಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ರ‌್ಯಾಲಿಗೆ ಅನುಮತಿ ನೀಡಬಾರದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಚುನಾವಣಾಧಿಕಾರಿಗೆ ಒತ್ತಾಯಿಸಿದರು.
ಮೋದಿಯವರು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಜಾತಿ, ಧರ್ಮಗಳ ನಡುವೆ ದ್ವೇಷ ಮೂಡಿಸುವ ಭಾಷಣ ಮಾಡುವುದರಿಂದ ಶಾಂತಿ ಹಾಗೂ ಸುವ್ಯವಸ್ಥೆಗೆ ದಕ್ಕೆ ಉಂಟಾಗಲಿದ್ದು, ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಬಾರದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆಯಲ್ಲಿ ಬಿಜೆಪಿ ಸೋಲುತ್ತದೆಂದು ಖಚಿತ ವರದಿಗಳು ಬಂದ ಬಳಿಕ ಸಂಸದ ಸಿದ್ದೇಶ್ವರ ಅವರು ಕಾಡಿ ಬೇಡಿ ಮೋದಿಯವರ ಕಾರ್ಯಕ್ರಮ ಹಾಕಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಡಿಸಿಗೆ ಮನವಿ ಸಲ್ಲಿಸಲಾಗುವುದು. ಒಂದುವೇಳೆ ಅವಕಾಶ ನೀಡಿದರೆ ಕಾಂಗ್ರೆಸ್‌ನಿಂದ ಕಪ್ಪುಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.
ಪಾಲಿಕೆ ಸದಸ್ಯ ಕೆ. ಚಮನ್‌ಸಾಬ್, ಮುಖಂಡರಾದ ಹುಲಿಕಟ್ಟೆ ಚಂದ್ರಪ್ಪ, ಕೆ.ಎಂ. ಮಂಜುನಾಥ್, ಮಹಮ್ಮದ್ ಸಮೀವುಲ್ಲಾ, ಬಿ. ವಿನಾಯಕ್, ಡಿ. ಶಿವಕುಮಾರ್ ಇತರರು ಸುದ್ದಿಗೋಷ್ಟಿಯಲ್ಲಿದ್ದರು.