ದಾವಣಗೆರೆ: ಚನ್ನಗಿರಿ ತಾಲೂಕಿನ ನಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿಗದಿಯಾಗಿದ್ದ ಚುನಾವಣೆಗೆ ನಕಲಿ ಮತದಾರರ ಪಟ್ಟಿ ಸೃಷ್ಟಿಸಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ನೇತೃತ್ವದಲ್ಲಿ ರೈತರು, ಷೇರುದಾರರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಪತ್ತಿನ ಸಂಘದ ಒಟ್ಟು 12 ಸ್ಥಾನಗಳಿಗೆ ಭಾನುವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ಸದಸ್ಯರು ಕನಿಷ್ಠ 3 ಸಭೆಗೆ ಹಾಜರಾಗಿ ಸಭಾ ನಡಾವಳಿ ಪುಸ್ತಕದಲ್ಲಿ ಸಹಿ ಮಾಡುವುದು ನಿಯಮ.
ಆದರೆ ಸಭೆಗೆ ಹಲವು ಸದಸ್ಯರು ಗೈರಾಗಿದ್ದರೂ, ವೈಟ್ನರ್ ಹಚ್ಚಿ ನಕಲಿ ಸಹಿಗಳನ್ನು ಮಾಡಿ ಸದಸ್ಯರು ಹಾಜರಾಗಿದ್ದರು ಎಂಬಂತೆ ತಿದ್ದುಪಡಿ ಮಾಡಿ ನಕಲು ಮತದಾರರ ಪಟ್ಟಿ ಸೃಷ್ಟಿಸಲಾಗಿದೆ ಎಂದು ಶಾಸಕರು ದೂರಿದರು.
ಈ ಸೊಸೈಟಿಯಲ್ಲಿ ಒಬ್ಬ ರೈತರಿಗೆ ಎಕರೆಗೆ 10 ಸಾವಿರ ರೂ., ಮತ್ತೊಬ್ಬರಿಗೆ 1 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಹೆಚ್ಚಿನ ಸಾಲ ಕೇಳಿದರೆ ಐತರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಹಣ ದುರ್ಬಳಕೆಯೂ ನಡೆಯುತ್ತಿದೆ. ಇಲ್ಲಿನ ಅಧಿಕಾರಿಗಳನ್ನು ಬದಲಾವಣೆ ಮಾಡುವಂತೆ ಈ ಹಿಂದೆಯೂ ಮನವಿ ಮಾಡಿದ್ದೆ. ಆದರೂ ಕ್ರಮವಾಗಿಲ್ಲ ಎಂದರು.
ಅಕ್ರಮದ ಗೂಡಾದ ಈ ಸೊಸೈಟಿಯನ್ನು ಕೂಡಲೆ ಸೂಪರ್‌ಸೀಡ್ ಮಾಡಬೇಕು. ಸಮಗ್ರ ತನಿಖೆ ನಡೆಸಬೇಕು. ಸೊಸೈಟಿಯ ಕಾರ್ಯದರ್ಶಿ, ಸಿಡಿಒ, ಎಆರ್‌ಸಿ, ಡಿಆರ್‌ಸಿ ಈ ನಾಲ್ವರೂ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಸೋಮವಾರ ರೈತರು ಸೊಸೈಟಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಸಹಕಾರ ಸಂಘಗಳ ಉಪನಿಬಂಧಕರು ಹಾಜರಾಗಿ ಪರಿಶೀಲನೆ ಮಾಡಿಲ್ಲ. ಜಿಲ್ಲಾಧಿಕಾರಿಗೆ ನಾನು ಖುದ್ದು ಕರೆ ಮಾಡಿದರೆ ಕೆಲವೇ ಕ್ಷಣದಲ್ಲಿ ಸ್ವಿಚಾಫ್ ಆಯಿತು. ನಾನು ರೈತರ ಪ್ರತಿನಿಧಿಯಾಗಿ ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಹೇಳಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಶಾಸಕರ ಮನವೊಲಿಸಲು ಯತ್ನಿಸಿದರು. ಯುವಜನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಿಮ್ಮ ಕರೆ ಬಂದಾಗ ತಾಂತಿಕ ಕಾರಣಕ್ಕೆ ಮೊಬೈಲ್ ಸ್ವಿಚಾಫ್ ಆಯಿತು ಎಂದು ಹೇಳಿದರು. ಸೊಸೈಟಿ ಅಕ್ರಮ ಆರೋಪದ ಸಂಬಂಧ ಕ್ರಮವಹಿಸುವುದಾಗಿ ಭರವಸೆ ನೀಡಿದ ನಂತರ ಶಾಸಕರು ಧರಣಿ ಹಿಂಪಡೆದರು.
ಪ್ರತಿಭಟನೆಯಲ್ಲಿ ನಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷ ರಾಮಪ್ಪ, ಚನ್ನಗಿರಿ ಪುರಸಭೆ ಮಾಜಿ ಅಧ್ಯಕ್ಷ ಪಿ.ಆರ್. ಮಂಜುನಾಥ್, ವಿಶ್ವನಾಥ್, ಬಸವರಾಜ್, ಗುಜರಿ ಸೈಫುಲ್ಲಾ ಇತರರಿದ್ದರು.
ತನಿಖೆಗೆ ಆದೇಶ
ಅಪರ ಜಿಲ್ಲಾಧಿಕಾರಿ, ಹೊನ್ನಾಳಿ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಮೂವರೂ ಸೇರಿ ತನಿಖೆ ನಡೆಸಿ ಮೂರು ದಿನದಲ್ಲಿ ವರದಿ ನೀಡುವಂತೆ ಆದೇಶಿಸಿದ್ದೇನೆ. ವರದಿ ಬಳಿಕ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಲು ಕ್ರಮ ವಹಿಸಲಾಗುವುದು. ಅಲ್ಲಿಯವರೆಗೆೆ ಚುನಾವಣೆ ಮುಂದೂಡಲಾಗಿದೆ.
ಜಿ.ಎಂ. ಗಂಗಾಧರಸ್ವಾಮಿ ಜಿಲ್ಲಾಧಿಕಾರಿ.