ದಾವಣಗೆರೆ: ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಕೆಲವು ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಇಲ್ಲದ್ದರಿಂದ ರೈತರು, ವಿದ್ಯಾರ್ಥಿಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಆ ಮಾರ್ಗಗಳಿಗೆ ಕೂಡಲೇ ಬಸ್ ಸೌಕರ್ಯ ಒದಗಿಸಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಿದರು.
ನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಭೆ ನಡೆಸಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇಲ್ಲದ ಗ್ರಾಮಗಳಲ್ಲಿ ಜನರು ದ್ವಿಚಕ್ರ ವಾಹನ, ಆಟೊ, ಟೆಂಪೊ, ಸರಕು ಸಾಗಣೆ ವಾಹನ, ಟ್ರ್ಯಾಕ್ಟರ್‌ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಸೂಕ್ತ ಸಾರಿಗೆ ಇಲ್ಲದ ಕಾರಣ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ನಿತ್ಯ ಓಡಾಡುವವರಿಗೆ ಕಷ್ಟವಾಗಿದೆ ಎಂದು ಹೇಳಿದರು.
ಮಾಯಕೊಂಡದಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಬಸ್ ನಿಲ್ದಾಣ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಕೂಡಲೇ ಕಾಮಗಾರಿಗೆ ಕ್ರಮ ವಹಿಸಬೇಕು. ಮಾಯಕೊಂಡ ಬಸ್ ನಿಲ್ದಾಣದಲ್ಲಿ ದಾವಣಗೆರೆ-ಹೊಸದುರ್ಗ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಒಬ್ಬ ಕಂಟ್ರೋಲರ್ ನೇಮಿಸಿ ನಿರ್ಗಮನ ಮತ್ತು ಆಗಮನ ಬಸ್‌ಗಳ ಹಾಜರಿ ಹಾಕಲು ಕ್ರಮ ವಹಿಸಬೇಕೆಂದರು.
ಮಾಯಕೊಂಡ ಮತ್ತು ಬಸವಾಪಟ್ಟಣದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಈ ಭಾಗದಿಂದ ಬೆಂಗಳೂರಿಗೆ ತೆರಳಲು ಬಸ್ ಸೌಲಭ್ಯ ಕಲ್ಪಿಸಬೇಕು. ಕರೊನಾ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಹಳೇ ಮಾರ್ಗಗಳಲ್ಲಿ ಬಸ್ ಸಂಚಾರ ಮರು ಆರಂಭ ಮಾಡಲು ಸೂಚನೆ ನೀಡಿದರು.
ಚನ್ನಗಿರಿ ತಾಲೂಕಿನ ಕಾರಿಗನೂರು ಮಾರ್ಗವಾಗಿ ಕತ್ತಲಗೆರೆ, ಬೆಳಲಗೆರೆ, ಸಾಗರಪೇಟೆ, ದಾಗಿನಕಟ್ಟೆ, ಕಂಚುಗಾರನಹಳ್ಳಿ ಹಾಗೂ ನಿಲೋಗಲ್ಗಳಲ್ಲಿ ಬಸ್ ಸಂಚರಿಸಬೇಕು. ಗುಡ್ಡದ ಕುಮಾರನಹಳ್ಳಿ ಮಾರ್ಗವಾಗಿ ಹೊನ್ನಾಳಿ ಮತ್ತು ದಾವಣಗೆರೆ ತಾಲೂಕಿನ ಜಮ್ಮಾಪುರ, ಕೆರೆಯಾಗಳಹಳ್ಳಿಗೆ ಹಾಗೂ ಗಿರಿಯಾಪುರ ಮಾರ್ಗವಾಗಿ ಅಣಜಿಗೆ ಹೋಗಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಶಾಸಕರ ಒತ್ತಾಯದ ಮೇರೆಗೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಕೂಡಲೇ ಆ ಮಾರ್ಗಗಳಿಗೆ ಬಸ್ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ಶಂಭಣ್ಣ, ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಅಧಿಕಾರಿಗಳಿದ್ದರು.