ದಾವಣಗೆರೆ: ಹಿಂದಿನ ಚುನಾವಣೆ ವೇಳೆ ನಮ್ಮ ಮನೆ ಬಾಗಿಲು ಕಾದಿದ್ದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಲ್ಲ, ಬಿಜೆಪಿ ಶಾಸಕ ಬಿ.ಪಿ. ಹರೀಶ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಬಾಗಿಲು ಕಾದಿದ್ದಲ್ಲದೆ ಅಂದಿನ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧವೂ ದೂರು ಹೇಳಿದ್ದ. ಹಿಂದಿನ ಚುನಾವಣೆಯಲ್ಲಿ ನಮ್ಮ ಪರ ಪ್ರಚಾರವನ್ನೂ ಮಾಡಿದ್ದ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರೇಣುಕಾಚಾರ್ಯ ಹೇಳಿದ್ದರಲ್ಲಿ ಸತ್ಯವಿದೆ. ಈ ವಿಚಾರವಾಗಿ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಗಂಟೆ ಹೊಡೆಯಲಿ ಎಂದು ರೇಣುಕಾಚಾರ್ಯ ಹಾಕಿರುವ ಸವಾಲನ್ನು ಸ್ವೀಕರಿಸಲಿ ಎಂದೂ ಹೇಳಿದರು.
ಎಲುಬಿಲ್ಲದ ನಾಲಿಗೆ ಎಂದು ಏನನ್ನೋ ಮಾತನಾಡುವುದು ಸರಿಯಲ್ಲ. ಹರಿಹರ ಕ್ಷೇತ್ರದ ಜನರು ಚುನಾಯಿಸಿದ್ದಾರೆ. ಅಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಬಂದು ಚರ್ಚಿಸಲಿ. ಅದರ ಬದಲಾಗಿ ತಿಳಿವಳಿಕೆ ಇಲ್ಲದಂತೆ ಮಾತನಾಡಬಾರದು.
ಹೋರ್ಡಿಂಗ್ಸ್ ಬಗ್ಗೆ ಅಸಮಾಧಾನವಿದ್ದಲ್ಲಿ ಜಿಪಂ ತ್ರೈಮಾಸಿಕ ಕೆಡಿಪಿ ಸಭೆ ಸಂದರ್ಭದಲ್ಲೇ ಪ್ರಸ್ತಾಪ ಮಾಡಬಹುದಿತ್ತು. ಅದರ ಬದಲಾಗಿ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಲು ಮುಂದಾಗಿದ್ದಾರೆ. ನನ್ನ ಬಗ್ಗೆ ದೂರುವ ಹರೀಶ್ ಮಗ ಹೋರ್ಡಿಂಗ್ಸ್ ಹಾಕುವ ಗುತ್ತಿಗೆ ನಡೆಸುತ್ತಿಲ್ಲವೆ? ಎಂದು ಪ್ರಶ್ನಿಸಿದರು.
ಹರಿಹರದ ಗುತ್ತಿಗೆದಾರನೊಬ್ಬ ದಯಾಮರಣಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಬರೆದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಗುತ್ತಿಗೆ ವಿಚಾರದಲ್ಲಿ ನಮ್ಮ ಪಾಲುದಾರಿಕೆ ಇಲ್ಲ. ಗುತ್ತಿಗೆದಾರನಿಗೆ ಶಾಸಕರ ಒತ್ತಡವಿರಬಹುದು. ಒಟ್ಟಾರೆ ಪತ್ರ ಬರೆದಿರುವ ಕುರಿತಂತೆ ತನಿಖೆ ನಡೆಸಲು ಎಸ್ಪಿ ಅವರಿಗೆ ಸೂಚಿಸುವುದಾಗಿ ಹೇಳಿದರು.